ಕೊಪ್ಪಳದ ಭಾಗ್ಯನಗರ ರಸ್ತೆಯಲ್ಲೊಂದು ಅಕ್ರಮ ಮದ್ಯದ ಅಡ್ಡ!

ಸಾವಜಿ ಖಾರಕ್ಕಿಂತ ಸಾರಾಯಿ ಘಾಟೇ ಇಲ್ಲಿ ಹೆಚ್ಚು!”

ನೋಡಿ ಸ್ವಾಮಿ, ಇದು ಕೊಪ್ಪಳದ ಭಾಗ್ಯನಗರ ರಸ್ತೆಯ ಕಥೆ. ಇಲ್ಲಿ ಬ್ರಿಡ್ಜ್ ಕೆಳಗಡೆ ಹೋದರೆ ನಿಮಗೆ ‘ಪವರ್ ಪ್ಯಾರಡೈಸ್ ಸಾವಜಿ ಹೋಟೆಲ್’ ಅನ್ನೋ ಬೋರ್ಡ್ ಕಾಣಿಸುತ್ತೆ. ಹೆಸರೇನೋ ಪ್ಯಾರಡೈಸ್, ಅಂದರೆ ಸ್ವರ್ಗ ಅಂತ. ಆದರೆ ಇಲ್ಲಿ ನಡೀತಿರೋದು ಮಾತ್ರ ನರಕಕ್ಕೆ ದಾರಿ ಮಾಡಿಕೊಡುವಂಥಾ ಅಪ್ಪಟ ಅಕ್ರಮ ದಂಧೆ!


​ಹೋಟೆಲ್ ಅಂದಮೇಲೆ ಅಲ್ಲಿ ಘಮಘಮಿಸೋ ಸಾವಜಿ ಊಟ ಇರಬೇಕು, ಬಿಸಿಬಿಸಿ ರೊಟ್ಟಿ ಇರಬೇಕು. ಆದರೆ ಈ ಪವರ್ ಪ್ಯಾರಡೈಸ್ ಹೋಟೆಲ್‌ನಲ್ಲಿ ಅದನ್ನೆಲ್ಲಾ ಮೀರಿಸುವಂಥಾ ‘ಲಿಕ್ವಿಡ್’ ಐಟಂಗಳೇ ಇಲ್ಲಿ ಫೇಮಸ್. ಹೌದು, ಕಳೆದ ಹಲವು ವರ್ಷಗಳಿಂದ ಇಲ್ಲಿ ನಿರಂತರವಾಗಿ ಮದ್ಯ ಸರಬರಾಜು ನಡೀತಿದೆ. ಈ ಹೋಟೆಲ್ ಹೆಸರಿಗಷ್ಟೇ ಹೋಟೆಲ್, ಕೆಲಸದಲ್ಲಿ ಮಾತ್ರ ಇದು ಪಕ್ಕಾ CL-7 ಬಾರ್‌ ಅನ್ನೋ ರೇಂಜ್‌ಗೆ ಪರಿವರ್ತನೆಯಾಗಿ ಹೋಗಿದೆ! ಸಾವಜಿ ಖಾರಕ್ಕಿಂತ ಸಾರಾಯಿ ಘಾಟೇ ಇಲ್ಲಿ ಹೆಚ್ಚು!” ಅಧಿಕಾರಿಗಳೇ, ನಿಮ್ಮ ಕಣ್ಣಿಗೆ ಪೊರೆ ಬಂದಿದೆಯೇ?
​ಈ ಹೋಟೆಲ್ ಮಾಲೀಕರಿಗೆ ನಗರಸಭೆ ಮತ್ತು FSSAI ನವರು ಪರವಾನಗಿ ಕೊಟ್ಟಿರೋದು ಹಸಿವು ನೀಗಿಸೋ ಹೋಟೆಲ್ ನಡೆಸಲಿ ಅಂತಲೇ ಹೊರತು, ಕುಡುಕರ ದರ್ಬಾರ್ ನಡೆಸಲಿಕ್ಕಲ್ಲ. ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಅಬಕಾರಿ ಇಲಾಖೆ ಕುಂಭಕರ್ಣನ ನಿದ್ದೆಗೆ ಜಾರಿದಂತಿದೆ.

ಕೊಪ್ಪಳದ ಭಾಗ್ಯನಗರ ಬ್ರಿಡ್ಜ್ ಕೆಳಗೊಂದು ಅಕ್ರಮ ಸಾಮ್ರಾಜ್ಯ. ಅಬಕಾರಿ ಇಲಾಖೆಯ ಮೌನಕ್ಕೆ ಬೆಲೆ ಎಷ್ಟು?ಅಬಕಾರಿ ನಿರೀಕ್ಷಕ ಮಂಜುನಾಥ ಗಲಗಲಿ ಅವರೇ, ಸ್ವಲ್ಪ ಇತ್ತ ಗಮನಿಸಿ. ನಿಮ್ಮ ಮೂಗಿನ ಕೆಳಗೇ ಇಷ್ಟೆಲ್ಲಾ ದಂಧೆ ನಡೀತಿದ್ದರೂ ನಿಮಗೇನು ತಿಳಿಯುತ್ತಿಲ್ಲವೇ? ಅಥವಾ ತಿಳಿದೂ ತಿಳಿಯದಂತೆ ಕಣ್ಣು ಮುಚ್ಚಿ ಕುಳಿತಿದ್ದೀರಾ? ನಿಮ್ಮ ಆಡಳಿತ ಅವಧಿಯಲ್ಲಿ ಕೊಪ್ಪಳ ನಗರವನ್ನು ಸುಭಿಕ್ಷವಾಗಿ ನೋಡಿಕೊಳ್ಳಬೇಕಾದ್ದು ನಿಮ್ಮ ಕರ್ತವ್ಯ. ಇಂತಹ ಅಕ್ರಮ ಅಡ್ಡೆಗಳಿಗೆ ನೀವೇನಾದರೂ ಬೆನ್ನೆಲುಬಾಗಿ ನಿಂತರೆ, ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ಈ ನಿರ್ಲಕ್ಷ್ಯದ ಆಡಳಿತವನ್ನು ಬಿಟ್ಟು ಕೂಡಲೇ ಎಚ್ಚೆತ್ತುಕೊಳ್ಳಿ. ಪವರ್ ಪ್ಯಾರಡೈಸ್ ಅಲ್ಲ, ಇದು ಕುಡುಕರ ನರಕ!
​​ನಗರಸಭೆ ಮತ್ತು FSSAI ಅಧಿಕಾರಿಗಳೇ, ಒಂದು ಹೋಟೆಲ್ ಬಾರ್ ಆಗಿ ಪರಿವರ್ತನೆಯಾಗುತ್ತಿದ್ದರೂ ನಿಮಗೆ ಯಾಕೆ ವಾಸನೆ ಬಡಿಯುತ್ತಿಲ್ಲ? ಕೂಡಲೇ ಈ ಹೋಟೆಲ್‌ನ ಪರವಾನಗಿಯನ್ನು ರದ್ದುಗೊಳಿಸಬೇಕು. ಅಬಕಾರಿ ಇಲಾಖೆಯ ನಿರೀಕ್ಷಕರು ತಕ್ಷಣವೇ ಈ ಹೋಟೆಲ್ ಮಾಲೀಕರ ವಿರುದ್ಧ ಅಬಕಾರಿ ಕಾಯ್ದೆಯಡಿ ಕಠಿಣ ಕೇಸ್ ದಾಖಲಿಸಬೇಕು.
​ಇಲ್ಲವಾದರೆ, ಕೊಪ್ಪಳದ ಜನತೆ ನಿಮ್ಮ ಈ ನಾಟಕವನ್ನು ನೋಡುತ್ತಾ ಸುಮ್ಮನೆ ಕೂರುವುದಿಲ್ಲ. ಕಾನೂನು ಅಂದರೆ ಗೌರವ ಇರಲಿ, ದಂಧೆಕೋರರ ಜತೆ ದೋಸ್ತಿ ಬೇಡ.

error: Content is protected !!
Scroll to Top