‘ನವಜೀವನ’ದ ಅಸಲಿ ಮುಖವಾಡ ಕಳಚಿದ ಸರ್ಕಾರಿ ದಾಖಲೆಗಳು!

ಪರವಾನಗಿ ಇಲ್ಲದ ‘ನವಜೀವನ’ಕ್ಕೆ ಅಭಯ ಹಸ್ತ; ರೋಗಿಗಳ ಪ್ರಾಣದ ಜೊತೆಗಿನ ಚೆಲ್ಲಾಟಕ್ಕೆ ಡಿ.ಎಚ್.ಓ ಲಿಂಗರಾಜ್ ಅವರೇ ನೇರ ಹೊಣೆ!

ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಫೆ:03

ಸತ್ತವರೂ ಎದ್ದು ಬಂದು ಓಡಾಡುತ್ತಾರೆ ಅಂದರೆ ನೀವು ನಂಬುತ್ತೀರಾ? ಇಲ್ಲ ತಾನೇ? ಆದರೆ ಕೊಪ್ಪಳದ ಆ ಹೊಸಪೇಟೆ ರಸ್ತೆಯ ಬ್ಯಾಂಕ್ ಆಫ್ ಬರೋಡಾ ಹಿಂದೆ ಇರುವ ಕಟ್ಟಡದಲ್ಲಿ ಇಂತಹದ್ದೊಂದು ಪವಾಡ ನಡೆಯುತ್ತಿದೆ! ಅಲ್ಲಿ ಸತ್ತಿರುವುದು ಮನುಷ್ಯನಲ್ಲ, ಬದಲಿಗೆ ಕಾನೂನು ಮತ್ತು ಆ ಆಸ್ಪತ್ರೆಯ ಪರವಾನಗಿ. ಆದರೂ ಅಲ್ಲಿ ‘ನವಜೀವನ’ದ ಹೆಸರಿನಲ್ಲಿ ರೋಗಿಗಳ ಎದೆಯ ಮೇಲೆ ಸಾವಿನ ಮೃದಂಗ ಬಾರಿಸಲಾಗುತ್ತಿದೆ. ನನ್ನ ಮುಂದೆ ಈಗ ಸರಕಾರಿ ಕಾಗದಗಳಿವೆ. ಈ ಕಾಗದಗಳು ಕೇವಲ ಅಕ್ಷರಗಳಲ್ಲ ಇವು ಈ ಆಸ್ಪತ್ರೆಯ ಅಸಲಿ ಮುಖವಾಡವನ್ನು ಸೀಳಿ ಹಾಕುವ ಹರಿತವಾದ ಚಾಕುಗಳು.

ಲೈಸೆನ್ಸ್ ಸತ್ತು ಆರು ತಿಂಗಳಾದರೂ ನಿಲ್ಲದ ದರೋಡೆ!
​ಒಮ್ಮೆ ಆ ಡಿ.ಎಚ್.ಒ ಲಿಂಗರಾಜ್ ಕೊಟ್ಟ ನೋಟಿಸ್ ನೋಡಿ. ಜೂನ್ 8, 2025 ರಂದೇ ಈ ಆಸ್ಪತ್ರೆಯ KPME ಪರವಾನಗಿ ಮುಕ್ತಾಯವಾಗಿದೆ. ಸೆಪ್ಟೆಂಬರ್ 2024 ರಲ್ಲೇ ಸ್ಕ್ಯಾನಿಂಗ್ ಸೆಂಟರ್‌ನ ಲೈಸೆನ್ಸ್ ಉಸಿರು ಚೆಲ್ಲಿದೆ. ಅಂದರೆ, ಕಳೆದ ಆರು ತಿಂಗಳಿಂದ ಅಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಿಕಿತ್ಸೆಯೂ ಕಾನೂನುಬಾಹಿರ, ಅಲ್ಲಿ ಹರಿಯುತ್ತಿರುವ ಪ್ರತಿ ಹನಿ ರಕ್ತಕ್ಕೂ ಯಾರೂ ಜವಾಬ್ದಾರರಿಲ್ಲ! ಇಷ್ಟೆಲ್ಲಾ ಗೊತ್ತಿದ್ದೂ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ? ಆಸ್ಪತ್ರೆಯ ಮಾಲೀಕರು ಎಸೆದ ನೋಟಿನ ಕಂತೆಗಳಿಗೆ ಇಲಾಖೆಯ ಕಣ್ಣುಗಳು ಕುರುಡಾಗಿವೆಯೇ?

ನಕಲಿ ರಸೀದಿ ನೀಡಿ ಸರಕಾರಕ್ಕೇ ಪಂಗನಾಮ!
​ಈ ಕಿರಾತಕರ ಧೈರ್ಯ ನೋಡಿ ಲೈಸೆನ್ಸ್ ನವೀಕರಣ ಮಾಡಿದ್ದೇವೆ ಎಂದು ನಂಬಿಸಲು ಇವರು ಮಾಡಿದ್ದು ಮಹಾನ್ ವಂಚನೆ. 40,000 ರೂಪಾಯಿ ಕಟ್ಟಿದ್ದೇವೆ ಎಂದು ಇಲಾಖೆಗೆ ಸುಳ್ಳು ರಸೀದಿ ತೋರಿಸಿದ್ದಾರೆ. ಆದರೆ ತಾಲೂಕು ವೈದ್ಯಾಧಿಕಾರಿಗಳ ಲಾಗಿನ್ ಚೆಕ್ ಮಾಡಿದಾಗ ಇಂತಹ ಯಾವುದೇ ಹಣ ಜಮೆಯಾಗಿಲ್ಲ ಎಂಬ ಕಹಿಸತ್ಯ ಬಯಲಾಗಿದೆ. ಅಂದರೆ ರೋಗಿಗಳನ್ನಷ್ಟೇ ಅಲ್ಲ, ಇವರು ಇಡೀ ಸರಕಾರವನ್ನೇ ಏಮಾರಿಸಲು ಹೊರಟಿದ್ದಾರೆ!

ಸೆಕ್ಯೂರ್’ ಸತ್ತಿದೆ, ‘ನವಜೀವನ’ದ ಹೆಸರಿನಲ್ಲಿ ದೆವ್ವದಾಟ ಶುರುವಾಗಿದೆ!
​ದಾಖಲೆಗಳಲ್ಲಿ ‘ಸೆಕ್ಯೂರ್ ಆಸ್ಪತ್ರೆ’ಯ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸುವಂತೆ ಸ್ವತಃ ಡಾ. ಅನಿಲ್ ಕುಮಾರ್ ಬಿ.ಕೆ ಅರ್ಜಿ ಕೊಟ್ಟಿದ್ದಾರೆ. ಪರವಾನಗಿಯೇ ರದ್ದಾದ ಮೇಲೆ ಅಲ್ಲಿ ‘ನವಜೀವನ’ ಎಂಬ ಬೋರ್ಡ್ ಹಾಕಿ ಸಾವಿರಾರು ರೂಪಾಯಿ ಬಿಲ್ ಮಾಡಲು ಇವರಿಗೆ ಯಾವ ಧೈರ್ಯ ನೀಡಿದೆ? ನನ್ನ ಹತ್ತಿರವಿರುವ ಜನವರಿ 26, 2026ರ ಬಿಲ್‌ನಲ್ಲಿ 19,100 ರೂಪಾಯಿ ವಸೂಲಿ ಮಾಡಲಾಗಿದೆ. KPME ಸಂಖ್ಯೆ ಇಲ್ಲದ ಈ ಬಿಲ್ ಬದುಕುವ ಭರವಸೆಯಲ್ಲ, ಇದು ಸುಲಿಗೆಯ ಸಾಕ್ಷಿ!

ಕೊಪ್ಪಳದ ಜಿಲ್ಲಾಧಿಕಾರಿಗಳೇ, ನಿಮ್ಮ ಮೂಗಿನ ಕೆಳಗೇ ಸತ್ತ ಪರವಾನಗಿಯ ಮೇಲೆ ಹೊಸ ಅಂಗಡಿ ತೆರೆದು ರೋಗಿಗಳ ಪ್ರಾಣದ ಜೊತೆ ಜೂಜಾಡುತ್ತಿದ್ದಾರೆ. ಇನ್ನೂ ಎಷ್ಟು ಜನರ ಬಲಿ ಬೇಕು ನಿಮಗೆ ಈ ಆಸ್ಪತ್ರೆಯನ್ನು ಸೀಜ್ ಮಾಡಲು? ಸದ್ಯಕ್ಕೆ ಇಷ್ಟು… ಈ ಬೆಂಕಿ ಸುಮ್ಮನೆ ಆರುವುದಿಲ್ಲ, ವ್ಯವಸ್ಥೆಯ ಅಕ್ರಮಕ್ಕೆ ಮದ್ದರೆಯುವವರೆಗೂ ಇದು ಉರಿಯುತ್ತಲೇ ಇರುತ್ತದೆ! ಆಸ್ಪತ್ರೆಯ ಗೋಡೆಗಳ ಮೇಲೆ ಕೆಪಿಎಂಇ ಸಂಖ್ಯೆ ಇರಬೇಕಾದ ಜಾಗದಲ್ಲಿ ಬರೀ ಶೂನ್ಯ ಆವರಿಸಿದೆ. ಅಲ್ಲಿಗೆ ಬರುವ ಅಮಾಯಕ ರೋಗಿಗಳಿಗೆ ತಾವು ಹೋಗುತ್ತಿರುವುದು ಅಧಿಕೃತ ಆಸ್ಪತ್ರೆಗೋ ಅಥವಾ ದಾಖಲೆಗಳೇ ಇಲ್ಲದ ಮಾಯಾಲೋಕಕ್ಕೋ ಎಂಬ ಸಣ್ಣ ಸುಳಿವು ಕೂಡ ಇಲ್ಲ.
ಕೊಪ್ಪಳದ ಆರೋಗ್ಯ ಇಲಾಖೆಯ ಲಿಂಗರಾಜ್ ಈ ‘ನವಜೀವನ’ದ ಕಡೆಗೆ ಒಮ್ಮೆ ಕಣ್ಣು ಬಿಟ್ಟು ನೋಡುತ್ತಾರಾ? ಅಥವಾ ಯಾವುದೋ ಕಾಣದ ಹಸ್ತ ಈ ನಿಗೂಢತೆಯನ್ನು ಕಾಪಾಡುತ್ತಿದೆಯೇ? ಉತ್ತರ ಯಾರಿಗೂ ಗೊತ್ತಿಲ್ಲ. ಸದ್ಯಕ್ಕಂತೂ ಈ ಆಸ್ಪತ್ರೆ ಒಂದು ‘ಅನ್‌ಸೋಲ್ವ್ಡ್ ಮಿಸ್ಟರಿ’

ಮುಂದುವರೆಯುತ್ತದೆ…..

error: Content is protected !!
Scroll to Top