”ನಾಯಕರೇ… ಅಕ್ರಮಕ್ಕೆ ಬೆಂಗಾವಲಾಗಬೇಡಿ, ಜನರ ನಂಬಿಕೆ ಉಳಿಸಿಕೊಳ್ಳಿ!”
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಏ:23
ಬೆಳ್ಳಂಬೆಳಗ್ಗೆ ಮೈಮನ ತಣಿಸುವ ಇಬ್ಬನಿ ಸೂರ್ಯ ಬಂದ ಮೇಲೆ ಮಾಯವಾಗುವುದು ಪ್ರಕೃತಿ ನಿಯಮ. ಆದರೆ ಕೊಪ್ಪಳದ ಮಗ್ಗಲಲ್ಲಿ ಬೀಳುತ್ತಿರುವ ಈ ‘ಇಬ್ಬನಿ’ ಹಗಲು ಹೊತ್ತಿನಲ್ಲೇ ಜನರ ಕಣ್ಣಿಗೆ ಮಣ್ಣೆರಚುತ್ತಿದೆ. ಇದು ರಿಯಲ್ ಎಸ್ಟೇಟ್ ವ್ಯವಹಾರವಲ್ಲ ಬಾಸ್, ಇದು ಬಡವನ ಬೆವರಿನ ಹಣವನ್ನು ‘ಅಧಿಕಾರ’ದ ಪಡಸಾಲೆಯಲ್ಲಿ ಹೋಮ ಮಾಡುತ್ತಿರುವ ವ್ಯವಸ್ಥಿತ ಸಂಚು! ಹಿಂದಿನ ಸಂಚಿಕೆಯಲ್ಲಿ ನಾವು ನೋಡಿದಂತೆ…
ಟಣಕನಕಲ್ ಗ್ರಾಮದ ಆ 47 ಎಕರೆ ಕೃಷಿ ಭೂಮಿಯಲ್ಲಿ ‘ಇಬ್ಬನಿ ಗಾರ್ಡನ್’ ಎನ್ನುವ ಅಕ್ರಮದ ಬ್ರಹ್ಮಾಂಡವೊಂದು ಸೃಷ್ಟಿಯಾಗುತ್ತಿರುವುದನ್ನು ನಾವು ಬಯಲು ಮಾಡಿದ್ದೆವು. ಅದು ಕೇವಲ ಕೃಷಿ ಭೂಮಿಯಾಗಿದ್ದರೂ, ಡಿಸಿಯವರ ಎನ್.ಎ ಅಪ್ಪಣೆ ಇಲ್ಲದಿದ್ದರೂ ಅಲ್ಲಿ ಸೈಟುಗಳ ವ್ಯಾಪಾರ ಹೇಗೆ ರಾಜಾರೋಷವಾಗಿ ನಡೀತಿದೆ ಅನ್ನೋದನ್ನು ನಾವು ಬಿಚ್ಚಿಟ್ಟಿದ್ದೆವು. ಆದರೆ ಈ ಹಗರಣದ ಕೊಂಡಿಗಳು ಅಂದುಕೊಂಡಿದ್ದಕ್ಕಿಂತಲೂ ಆಳವಾಗಿವೆ…

ಓಜನಹಳ್ಳಿ ಪಿಡಿಒ ಶಿವಬಸಪ್ಪ ಕೊಟ್ಟಿರುವ ‘ಡೆತ್ ವಾರೆಂಟ್’!
ಈಗಾಗಲೇ ಓಜನಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಒಂದು ಪತ್ರ ಬರೆದಿದ್ದಾರೆ. ಆ ಪತ್ರ ಕೇವಲ ಕಾಗದದ ತುಣುಕಲ್ಲ, ಅದು ಈ ಅಕ್ರಮ ಲೇಔಟ್‌ನ ‘ಡೆತ್ ವಾರೆಂಟ್’. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ, ತನ್ನ ವ್ಯಾಪ್ತಿಯಲ್ಲಿ ಅಕ್ರಮ ನಿರ್ಮಾಣ ನಡೆಯುತ್ತಿದ್ದರೆ ಅದನ್ನು ತಕ್ಷಣವೇ ತಡೆಯುವುದು ಮತ್ತು ‘ಸ್ಟಾಪ್ ವರ್ಕ್’ ನೋಟಿಸ್ ನೀಡುವುದು ಪಿಡಿಒ ಅವರ ಕಾನೂನಾತ್ಮಕ ಜವಾಬ್ದಾರಿ. ಪಿಡಿಒ ಸಾಹೇಬರು ಪತ್ರದಲ್ಲಿ “ಇದು ಅಕ್ರಮ” ಎಂದು ಒಪ್ಪಿಕೊಂಡಿದ್ದಾರೆ. ಆದರೆ ಪ್ರಶ್ನೆ ಇರೋದು ಇಲ್ಲಿ… ಪತ್ರ ಬರೆದ ಮೇಲೆ ಅವರ ಕೈಗಳೇಕೆ ನಡುಗುತ್ತಿವೆ? ಅಕ್ರಮ ನಡೆಯುವ ಜಾಗಕ್ಕೆ ಜೆಸಿಬಿ ತರುವ ಧೈರ್ಯವನ್ನೇಕೆ ತೋರುತ್ತಿಲ್ಲ?

ಜಿಲ್ಲಾಧಿಕಾರಿಗಳ ಅಂಗಳದಲ್ಲಿ ಚೆಂಡು!
ಇನ್ನು ಜಿಲ್ಲೆಯ ಕ್ಯಾಪ್ಟನ್, ಮಾನ್ಯ ಜಿಲ್ಲಾಧಿಕಾರಿಗಳ ಪಾತ್ರ ಇಲ್ಲಿ ಅತಿ ದೊಡ್ಡದು. ಭೂ ಕಂದಾಯ ಕಾಯ್ದೆ 1964ರ ಕಲಂ 95ರ ಅಡಿಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸುವ ಅಧಿಕಾರ ಇರುವುದು ಇವರಿಗೆ ಮಾತ್ರ. ಅನುಮತಿ ಇಲ್ಲದೆ ಲೇಔಟ್ ನಿರ್ಮಿಸುವುದು ಕಾನೂನುಬಾಹಿರ. ಕಲಂ 96ರ ಪ್ರಕಾರ, ನಿಯಮ ಉಲ್ಲಂಘಿಸಿ ಲೇಔಟ್ ನಿರ್ಮಿಸಿದರೆ ಆ ಜಮೀನನ್ನು ಸರ್ಕಾರಿ ವಶಕ್ಕೆ ಪಡೆಯುವ ಅಧಿಕಾರ ತಮಗೆ ಇರುತ್ತದೆ.ಅಕ್ರಮ ಲೇಔಟ್ ಹಗರಣಗಳಲ್ಲಿ ಸಾರ್ವಜನಿಕರಿಗೆ ವಂಚನೆಯಾಗುತ್ತಿದ್ದರೆ, ಸಂಬಂಧಪಟ್ಟ ಕಂಪನಿಯ ಮೇಲೆ ಎಫ್‌ಐಆರ್ ದಾಖಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಬಹುದು.ಅಕ್ರಮ ಲೇಔಟ್‌ಗಳಲ್ಲಿನ ನಿವೇಶನಗಳ ನೋಂದಣಿಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾ ನೋಂದಣಾಧಿಕಾರಿಗಳಿಗೆ ಆದೇಶ ಹೊರಡಿಸಬಹುದು.ಇಷ್ಟು ಅವಕಾಶ ಇದ್ದರೂ ಕೂಡ ತಾವುಗಳು ಸುಮ್ಮನಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಡಿಸಿ ಸಾಹೇಬರ ಸಹಿ ಇಲ್ಲದೆ ಅಲ್ಲಿ ಒಂದು ಕಲ್ಲು ನಡುವುದೂ ಅಪರಾಧ. ಆದರೆ ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ದೂರ ಹೋಗಿದ್ದರೂ, ಅಲ್ಲಿನ ಫೈಲ್ ಮೇಲೆ ಧೂಳು ಕುಳಿತಿದೆ ಅಂದರೆ ಅರ್ಥವೇನು? ಜಿಲ್ಲೆಯ ಅತ್ಯುನ್ನತ ಅಧಿಕಾರಿಗಳೇ ಮೌನಕ್ಕೆ ಶರಣಾದರೆ, ಸಾಮಾನ್ಯ ಜನರಿಗೆ ನ್ಯಾಯ ಸಿಗುವುದು ಎಲ್ಲಿ?

ರಿಜಿಸ್ಟ್ರಾರ್ ಕಚೇರಿಯಲ್ಲೊಂದು ಅಕ್ರಮದ ‘ಸಂತೆ’!
ಇತ್ತ ಜಿಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾನೂನಿಗೆ ಸಂಪೂರ್ಣ ರಜೆ ಕೊಟ್ಟಂತಿದೆ. ಕೃಷಿ ಭೂಮಿಯ ಸೈಟುಗಳನ್ನು ನೋಂದಣಿ ಮಾಡುವಂತಿಲ್ಲ ಎನ್ನುವ ಸ್ಪಷ್ಟ ನಿಯಮವಿದ್ದರೂ, ರಿಜಿಸ್ಟ್ರಾರ್ ಸಾಹೇಬರು ಮಾತ್ರ ಕಣ್ಣು ಮುಚ್ಚಿಕೊಂಡು ಸೈಟುಗಳನ್ನು ನೋಂದಣಿ ಮಾಡಿಕೊಡುತ್ತಿದ್ದಾರೆ. ಪಂಚಾಯತ್‌ನಿಂದ ೯/೧೧ ದಾಖಲೆ ಇಲ್ಲದೆ, ಎನ್.ಎ ಆದೇಶವಿಲ್ಲದೆ ಈ ನೋಂದಣಿಗಳು ಸಾಧ್ಯವೇ? ಇದು ಭ್ರಷ್ಟಾಚಾರದ ಪರಾಕಾಷ್ಠೆಯೋ ಅಥವಾ ಮೇಲಿನವರ ‘ಆಜ್ಞೆ’ಯೋ?
ಬಿಸಿ ತುಪ್ಪವಾದ ‘ಪ್ರಭಾವಿ’ ಸಂಬಂಧಿಗಳ ನಂಟು! ಈ ಎಲ್ಲ ಅಕ್ರಮಗಳಿಗೆ ಧೈರ್ಯ ತುಂಬುತ್ತಿರುವುದು ಯಾವುದೋ ಸಣ್ಣಪುಟ್ಟ ಶಕ್ತಿಯಲ್ಲ. ಜಿಲ್ಲೆಯ ಪ್ರಭಾವಿ ರಾಜಕಾರಣಿಯ ಸಂಬಂಧಿಗಳು ಈ ‘ಇಬ್ಬನಿ’ಯ ಸೂತ್ರಧಾರಿ ಎನ್ನುವ ವಾಸನೆ ಈಗ ಕೊಪ್ಪಳದಾದ್ಯಂತ ಹರಡಿದೆ. ಪ್ರಭಾವಿ ಮನೆಯ ಸಂಬಂಧಿಕರೇ ಮಾಲೀಕರಾಗಿರುವಾಗ ಕಾನೂನುಗಳು ಮನೆಯ ಬಾಗಿಲಲ್ಲೇ ಮಂಡಿಯೂರಿ ನಿಲ್ಲಲೇಬೇಕು ಅಲ್ವೇ?
ಕಾನೂನಿನ ಪ್ರಕಾರ ಈ ಲೇಔಟ್‌ನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ, ನಕ್ಷೆ ಮಂಜೂರಾತಿ ಇಲ್ಲ. ಇಂದಲ್ಲ ನಾಳೆ ಕಾನೂನಿನ ಚಾವಟಿ ಬೀಸಿಯೇ ಬೀಸುತ್ತದೆ. ಅಂದು ಈ ಪ್ರಭಾವಿ ವ್ಯಕ್ತಿಗಳಾಗಲಿ, ಅಧಿಕಾರಿಗಳಾಗಲಿ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ನೀವು ಕೈಯಲ್ಲಿ ಹಿಡಿದಿರುವ ಆ ಖಾಲಿ ಬಾಂಡ್ ಪೇಪರ್ ನಿಮ್ಮನ್ನು ರಕ್ಷಿಸುವುದಿಲ್ಲ.
ಅಧಿಕಾರಿಗಳೇ… ಇನ್ನಾದರೂ ಮೌನ ಮುರಿಯಿರಿ. ನೀವು ಕುಳಿತಿರುವ ಕುರ್ಚಿ ಜನಸೇವೆಯದ್ದೇ ಹೊರತು ಪ್ರಭಾವಿಗಳ ಗುಲಾಮಗಿರಿಯದ್ದಲ್ಲ. ಇಂದೇ ಆ ‘ಇಬ್ಬನಿ’ಯ ಅಕ್ರಮವನ್ನು ತಡೆಯದಿದ್ದರೆ, ನಾಳೆ ಜನರ ಆಕ್ರೋಶದ ಮಳೆಯಲ್ಲಿ ನೀವು ತೇವವಾಗುವುದು ಗ್ಯಾರಂಟಿ.
ಒಂದು ಆತ್ಮೀಯ ಸಲಹೆ
ಆ ಪ್ರಭಾವಿ ವ್ಯಕ್ತಿ ಅಂದರೆ ಈ ಕ್ಷೇತ್ರದ ಜನರ ಪಾಲಿಗೆ ಕೇವಲ ಒಬ್ಬ ರಾಜಕಾರಣಿಯಲ್ಲ ಜನರ ಕಷ್ಟ ಸುಖಕ್ಕೆ ಓಗೊಡುವ, ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿರುವ ಒಬ್ಬ ಭರವಸೆಯ ನಾಯಕ. ಮುಂದಿನ ದಿನಗಳಲ್ಲಿ ಈ ಕ್ಷೇತ್ರವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಅವರ ಹೆಗಲ ಮೇಲಿದೆ. ಇಂತಹ ಜನಪ್ರಿಯ ನಾಯಕರು ಇಂತಹ ಸಣ್ಣಪುಟ್ಟ ಅಕ್ರಮಗಳ ಸುಳಿಗೆ ಸಿಲುಕಿ ತಮ್ಮ ಇಷ್ಟು ವರ್ಷದ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆ ಹಚ್ಚಿಕೊಳ್ಳುವುದು ಎಷ್ಟು ಸರಿ?
ಹೆಸರು ಕೆಡಿಸಿಕೊಳ್ಳುವುದು ಸುಲಭ, ಆದರೆ ಜನರ ಮನಸ್ಸಿನಲ್ಲಿ ಸ್ಥಾನ ಗಳಿಸುವುದು ಕಷ್ಟ. ಯಾವುದೋ ಒಂದು ಲೇಔಟ್‌ನ ಲಾಭಕ್ಕಾಗಿ, ನಿಮ್ಮನ್ನು ನಂಬಿದ ಜನರ ನಂಬಿಕೆಗೆ ದ್ರೋಹ ಮಾಡಬೇಡಿ. ಈ ಅಕ್ರಮಗಳನ್ನು ಸಮರ್ಥಿಸಿಕೊಳ್ಳುವ ಬದಲು, ಒಬ್ಬ ದೊಡ್ಡ ವ್ಯಕ್ತಿಯಾಗಿ ಈ ತಪ್ಪುಗಳನ್ನು ಸರಿಪಡಿಸಿ. ಕ್ಷೇತ್ರದ ಜನರ ರಕ್ಷಣೆಗೆ ನಿಲ್ಲುವುದು ನಿಮ್ಮ ಧರ್ಮವೇ ಹೊರತು, ಅಕ್ರಮಗಳಿಗೆ ಬೆಂಗಾವಲಾಗುವುದಲ್ಲ. ರಾಜಕೀಯ ಜೀವನದಲ್ಲಿ ಸಾವಿರಾರು ಅವಕಾಶಗಳು ಬರುತ್ತವೆ, ಆದರೆ ಜನರ ಹಾರೈಕೆ ಒಂದೇ ಬಾರಿ ಸಿಗುವುದು. ಅದನ್ನು ಉಳಿಸಿಕೊಳ್ಳಿ.
ತಪ್ಪುಗಳನ್ನು ತಿದ್ದಿಕೊಂಡು, ಜನಸಾಮಾನ್ಯರ ಹಿತ ಕಾಯುವ ನಿಟ್ಟಿನಲ್ಲಿ ಹೆಜ್ಜೆ ಇಡಿ. ಕ್ಷೇತ್ರದ ಭವಿಷ್ಯ ನಿಮ್ಮ ಕೈಯಲ್ಲಿದೆ, ಅದನ್ನು ಇಂತಹ ‘ಅಕ್ರಮದ ಇಬ್ಬನಿ’ಯಲ್ಲಿ ಕರಗಿಸಬೇಡಿ.
ಸತ್ಯಕ್ಕೆ ಯಾವತ್ತೂ ಸಾವಿಲ್ಲ, ನಾವು ಕಾಯುತ್ತಿದ್ದೇವೆ…
ಸಂಪಾದಕೀಯ ಸೂಚನೆ: ರಣಬೇಟೆ ವೆಬ್ ನ್ಯೂಸ್ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕ್ಷೇತ್ರದ ಹಿತದೃಷ್ಟಿಯಿಂದ ಈ ಸರಣಿಯನ್ನು ಪ್ರಕಟಿಸುತ್ತಿದೆ. ಇದು ಯಾರ ವೈಯಕ್ತಿಕ ದ್ವೇಷಕ್ಕಾಗಿ ಅಲ್ಲ, ವ್ಯವಸ್ಥೆಯ ಸುಧಾರಣೆಗಾಗಿ ಮಾತ್ರ.
ಸಂಚಿಕೆ ಮುಂದುವರೆಯುತ್ತದೆ….

