ಹಿಟಾಚಿಗಳ ಅಬ್ಬರಕ್ಕೆ ನಲುಗಿದ ಅಣೆಕಟ್ಟು ಕೆರೆಗಳನ್ನು ನುಂಗಿದವರಿಗೆ ಡ್ಯಾಮ್ ಯಾವ ಲೆಕ್ಕ?
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಏ:28
ಅಲ್ಲಿ ತುಂಗಭದ್ರೆ ಮೌನವಾಗಿ ಬತ್ತುತ್ತಿದ್ದಾಳೆ. ಆದರೆ ಆ ಮೌನದ ಹಿಂದೆ ಒಂದು ಭೀಕರವಾದ ಕಿರುಚಾಟವಿದೆ. ಅದು ಈ ಮಣ್ಣಿನ ಮಕ್ಕಳ ಅಳಲು. ಕೊಪ್ಪಳ ಮತ್ತು ಗಂಗಾವತಿಯ ಅಕ್ಕಪಕ್ಕದ ಇಟ್ಟಿಗೆ ಬಟ್ಟಿಗಳಿಗೆ ಬಿಸಿಯಾದ ಇಟ್ಟಿಗೆಗಳಾಗಲು ತುಂಗಭದ್ರಾ ಡ್ಯಾಮಿನ ಗರ್ಭದೊಳಗಿನ ಫಲವತ್ತಾದ ಮಣ್ಣು ಬಲಿಯಾಗುತ್ತಿದೆ. ಹಗಲು ದರೋಡೆ ಅಂದರೆ ಇದೇ ಇರಬೇಕು! ಮೊದಲು ಊರಿನ ಮುಗ್ಧ ಜನರಿಗೆ ಒಂದಿಷ್ಟು ಹಣದ ಆಮಿಷ ಒಡ್ಡಿ, ಊರ ಕೆರೆಗಳನ್ನೇ ನುಂಗಿ ನೀರು ಕುಡಿದ ಈ ಭೂಗಳ್ಳರ ದಾಹ ಈಗ ತುಂಗಭದ್ರೆಯ ಗರ್ಭದವರೆಗೂ ಚಾಚಿದೆ. ಇವರ ಹಸಿವು ಎಂಥದ್ದು ಗೊತ್ತೇ? ಮಣ್ಣು ಕಂಡರೆ ಸಾಕು, ಇವರಿಗೆ ಭೂತಾಯಿ ನೆನಪಾಗಲ್ಲ, ತಟ್ಟೆಯಲ್ಲಿರುವ ಕಾಂಚಾಣ ಮಾತ್ರ!

ಹಿಟಾಚಿಗಳ ಅಬ್ಬರ, ಟಿಪ್ಪರ್‌ಗಳ ಸವಾರಿ! ಕೆರೆ ನುಂಗಿದವರಿಗೆ ಡ್ಯಾಮ್ ಯಾವ ಲೆಕ್ಕ?
ಈ ಭೂಗಳ್ಳರು ಮೊದಮೊದಲು ಹಳ್ಳಿಗಳ ಕೆರೆಗಳಿಗೆ ಹೊಂಚು ಹಾಕಿದರು. ಮುಗ್ಧ ಜನರಿಗೆ ಒಂದಿಷ್ಟು ಹಣದ ಆಮಿಷ ಒಡ್ಡಿ, ಕೆರೆಗಳನ್ನೇ ನುಂಗಿ ನೀರು ಕುಡಿದರು. ಈಗ ಇವರ ಕೆಟ್ಟ ಕಣ್ಣು ಬಿದ್ದಿರುವುದು ತುಂಗಭದ್ರಾ ಡ್ಯಾಮಿನ ಹಿನ್ನೀರಿನ ಮೇಲೆ. ಹಿಟಾಚಿಗಳ ಅಬ್ಬರ, ಟಿಪ್ಪರ್‌ಗಳ ಸವಾರಿ ನೋಡಿ ಆ ಚಿತ್ರಗಳನ್ನು… ರಕ್ಕಸ ಗಾತ್ರದ ಹಿಟಾಚಿಗಳು ಅಣೆಕಟ್ಟಿನ ಹಿನ್ನೀರಿನ ಒಡಲನ್ನು ಬಗೆಯುತ್ತಿವೆ. ಅಕ್ರಮದ ಬ್ರಹ್ಮಾಂಡ ಈ ಭೂಗಳ್ಳರು ಸಾಲು ಸಾಲು ಟಿಪ್ಪರ್‌ಗಳನ್ನು ನಿಲ್ಲಿಸಿಕೊಂಡು ಮಣ್ಣನ್ನಲ್ಲ, ಅಣೆಕಟ್ಟಿನ ಆಯಸ್ಸನ್ನೇ ತುಂಬಿಕೊಂಡು ಹೋಗುತ್ತಿದ್ದಾರೆ. ಕಾನೂನು ಈ ದಂಧೆಕೋರರ ಜೇಬಿನಲ್ಲಿದೆ. ಟಿ.ಬಿ ಬೋರ್ಡ್ ಹೋಸಪೇಟೆ ವ್ಯಾಪ್ತಿಗೆ ಸೇರಿದ ಈ ಭೂಮಿ ಇಂದು ರಣಹದ್ದುಗಳ ಪಾಲಾಗಿದೆ.ಈ ಜಿಲ್ಲೆಯಲ್ಲಿ ಕಳ್ಳರ ವೈವಿಧ್ಯತೆ ನೋಡಿದರೆ ಆಶ್ಚರ್ಯವಾಗುತ್ತದೆ. ಮಣ್ಣು ಕಳ್ಳರು, ಕಲ್ಲು ಕಳ್ಳರು, ಮರಳು ಕಳ್ಳರು… ಅಷ್ಟೇ ಯಾಕೆ, ಸರ್ಕಾರಿ ಜಾಗವನ್ನೇ ಕಿಸೆಗೆ ಹಾಕಿಕೊಳ್ಳುವ ‘ಜಾಗ’ ಕಳ್ಳರು! ನೋಡಲು ಸಾಧುಗಳಂತೆ ಬಿಳಿ ಬಟ್ಟೆ ತೊಟ್ಟು ಓಡಾಡುವ ಇವರು, ರಾತ್ರೋರಾತ್ರಿ ಹಿಟಾಚಿಗಳ ಸದ್ದಿನಲ್ಲಿ ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಇವರಿಗೆ ಕಾನೂನಿನ ಭಯವಿಲ್ಲ, ಏಕೆಂದರೆ ಕಾನೂನು ಕಾಯಬೇಕಾದವರೇ ಇವರ ಎಸಿ ಕಾರಿನಲ್ಲಿ ಕುಳಿತು ಮೋಜು ಮಾಡುತ್ತಿದ್ದಾರೆ.

ಅಧಿಕಾರಿಗಳೇ, ನಿಮ್ಮ ಕಣ್ಣಿಗೆ ಪೊರೆ ಬಂದಿದೆಯೇ?
ಟಿ.ಬಿ ಬೋರ್ಡ್ ನ ಅಧಿಕಾರಿಗಳೇ ಕ.ನೀ.ನಿ.ನಿ.ಯ ಮುಖ್ಯ ಅಭಿಯಂತರರೇ, ಕಾರ್ಯಪಾಲಕ ಅಭಿಯಂತರರೇ… ನಿಮ್ಮ ಕಚೇರಿಯ ಎಸಿ ಗಾಳಿಯಲ್ಲಿ ಕುಳಿತು ಕಡತಗಳಿಗೆ ಸಹಿ ಹಾಕುವುದಷ್ಟೇ ನಿಮ್ಮ ಕೆಲಸವೇ? ನಿಮ್ಮ ಕಣ್ಣೆದುರೇ ಡ್ಯಾಮಿನ ಆಸ್ತಿ ಲೂಟಿಯಾಗುತ್ತಿದ್ದರೂ ಕುರುಡರಂತೆ ನಟಿಸುತ್ತಿರುವುದರ ಮರ್ಮವೇನು? ಇನ್ನು ಕೊಪ್ಪಳದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊಪ್ಪಳ ಜಿಲ್ಲೆಯ ಮತ್ತು ಟಿಬಿ ಡ್ಯಾಮ್ ಟಾಸ್ಕ್ ಫೋರ್ಸ್ ಸಮಿತಿ! ಇವರು ಇದ್ದಾರೋ ಅಥವಾ ಇತಿಹಾಸ ಸೇರಿದರೋ ಗೊತ್ತಿಲ್ಲ. ಇಷ್ಟೆಲ್ಲಾ ಮರಂ ಸಾಗಾಟವಾಗುತ್ತಿದ್ದರೂ ಕಾಣದಂತೆ ಇರುವುದಕ್ಕೆ ಇವರಿಗೆ ಮುಟ್ಟುತ್ತಿರುವ ‘ಕಾಣಿಕೆ’ ಎಷ್ಟು? ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ ನೋಡಿದರೆ ಅಚ್ಚರಿಯಾಗುತ್ತದೆ. ಇಡೀ ವ್ಯವಸ್ಥೆಯೇ ಈ ಭೂಗಳ್ಳರ ಮುಂದೆ ಮಂಡಿಯೂರಿ ಕುಳಿತಂತಿದೆ. ಕೊಪ್ಪಳದ ಈ ದಂಧೆಕೋರರ ಧೈರ್ಯ ಎಂಥದ್ದು ಗೊತ್ತೇ? ಕೆಲವು ದಿನಗಳ ಹಿಂದೆ ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮಕ್ಕೆ ಸುದ್ದಿ ನಿಮಿತ್ಯ ತೆರಳಿದಾಗ ಕಣ್ಣಿಗೆ ಕಂಡಿದ್ದು ಅವರ ಸಹಪಾಠಿ ಅಧಿಕಾರಿಗಳನ್ನು ವಿಚಾರಿಸಿದಾಗ ನನಗೆ ಶಾಕ್ ಆಯಿತು. ಸರಕಾರಿ ಅಧಿಕಾರಿಗಳನ್ನೇ ಎರಡು ದಿನಗಳ ಕಾಲ ತಮ್ಮ ಐಷಾರಾಮಿ ಕಾರಿನಲ್ಲಿ ಕೂರಿಸಿಕೊಂಡು ನಾಪತ್ತೆ ಮಾಡುತ್ತಾರೆ! ಕೆಲಸ ಮುಗಿದ ಮೇಲೆ ಅದೇ ಅಧಿಕಾರಿಗಳನ್ನು ಗೌರವಯುತವಾಗಿ ತಂದು ಕಚೇರಿಯ ಮುಂದೆ ಬಿಟ್ಟು ಹೋಗುವ ಸಾಹಸ ಈ ಪುಡಾರಿಗಳದ್ದು. ಇದು ಅಪಹರಣವೋ ಅಥವಾ ಅಧಿಕಾರಿಗಳಿಗೆ ಇವರು ನೀಡುತ್ತಿರುವ ‘ವಿಶೇಷ ಆತಿಥ್ಯವೋ’? ಜಿಲ್ಲಾಡಳಿತದ ಕಣ್ಣಿಗೆ ಇದು ಕಾಣುತ್ತಿಲ್ಲವೇ ಅಥವಾ ಕಾಣದಂತೆ ಬಟ್ಟೆ ಕಟ್ಟಿಕೊಂಡಿದ್ದಾರೆಯೇ?

ರಣಬೇಟೆ ತಂಡವು ಟಿ.ಬಿ. ಡ್ಯಾಮ್ ನ ಇ.ಇ ಚಂದ್ರಶೇಖರ್ ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರು ಈ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಮತ್ತು ಜಿಲ್ಲಾ ಟಾಸ್ಕ್ ಕೋರ್ಸ್ ಗಮನಕ್ಕೆ ತರುತ್ತೇನೆ ಈ ಕೂಡಲೇ ಪರಿಶೀಲನೆ ಮಾಡಲು ಪತ್ರ ವ್ಯವಹಾರ ಮಾಡುತ್ತೇವೆ ಎಂದು ಹೇಳಿದರು.
ವ್ಯವಸ್ಥೆಯೇ ನಗ್ನವಾಗಿ ನಿಂತಾಗ…
ಹಳ್ಳ, ಕೊಳ್ಳ, ಅಣೆಕಟ್ಟು – ಇವರ ಪಾಲಿಗೆ ಇವೆಲ್ಲಾ ಕೇವಲ ಹಣ ಮಾಡುವ ಮೂಲಗಳು. ಕಾನೂನು ಎಂಬುದು ಬಡವನಿಗೆ ಮಾತ್ರ ಬೆತ್ತ ತೋರಿಸುತ್ತದೆ, ಆದರೆ ಇಂತಹ ಪುಡಾರಿಗಳ ಮುಂದೆ ಮಂಡಿಯೂರಿ ನಿಲ್ಲುತ್ತದೆ. ಇವರನ್ನು ಕಟ್ಟಿ ಹಾಕಲು ಸಾಮಾನ್ಯ ಅಧಿಕಾರಿಗಳಿಂದ ಸಾಧ್ಯವಿಲ್ಲ; ಅದಕ್ಕೆ ಬೆನ್ನುಮೂಳೆ ಗಟ್ಟಿಯಿರುವ, ವ್ಯವಸ್ಥೆಯ ಕೊಳೆಯನ್ನು ತೊಳೆಯುವ ‘ದೊಡ್ಡಮಟ್ಟದ ವರಿಷ್ಠರೇ’ ಬರಬೇಕಿದೆ. ಸಾರ್ವಜನಿಕ ವಲಯದಲ್ಲಿ ಇಂದು ಬೆಂಕಿಯಂತಹ ಚರ್ಚೆ ನಡೆಯುತ್ತಿದೆ. ಹೀಗೆ ಅಣೆಕಟ್ಟಿನ ಸುತ್ತಮುತ್ತಲಿನ ಮಣ್ಣನ್ನು ಅಗೆದು ಸಾಗಿಸಿದರೆ, ನಾಳೆ ಅಣೆಕಟ್ಟಿನ ಸುರಕ್ಷತೆಗೆ ಧಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ. ಅಂದು ಸಂಭವಿಸುವ ಮಹಾ ಪ್ರವಾಹಕ್ಕೆ ಅಥವಾ ತಾಂತ್ರಿಕ ತೊಂದರೆಗೆ ಯಾರು ಹೊಣೆ? ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ರೈತರು ತಮ್ಮ ಬದುಕನ್ನೇ ಬಲಿ ಕೊಡಬೇಕೇ? ಈ ಲೂಟಿ ತಕ್ಷಣ ನಿಲ್ಲದಿದ್ದರೆ, ಮುಂದಿನ ಪೀಳಿಗೆಗೆ ತುಂಗಭದ್ರಾ ಅಣೆಕಟ್ಟು ಕೇವಲ ಕಥೆಯಾಗಲಿದೆ. ಭೂಗಳ್ಳರ ಕೈಗೆ ಸಿಕ್ಕಿ ನಲುಗುತ್ತಿರುವ ಭೂಮಿಯ ಗೋಳು ಅಧಿಕಾರಶಾಹಿಯ ಕಿವುಡು ಕಿವಿಗೆ ಬೀಳುತ್ತಿಲ್ಲ. ಜಿಲ್ಲಾಡಳಿತ ಮತ್ತು ಟಿ.ಬಿ ಬೋರ್ಡ್ ನ ಅಧಿಕಾರಿಗಳೇ , ಎಚ್ಚೆತ್ತುಕೊಳ್ಳಿ! ಇಲ್ಲದಿದ್ದರೆ ಈ ಮಣ್ಣಿನ ಶಾಪ ನಿಮ್ಮನ್ನು ಸುಡದೆ ಬಿಡದು.

