ಸಿಇಓ ಆದೇಶವನ್ನೇ ಕಸದ ಬುಟ್ಟಿಗೆ ಎಸೆದ ಬಿರಾದಾರ್ ಅಂಡ್ ಟೀಮ್!
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ:12 (ಸಂಚಿಕೆ-03)
ಬಿಸಿಲ ನಾಡು ಕೊಪ್ಪಳದ ಮಣ್ಣಿನಲ್ಲಿ ಈಗ ಬರೀ ಬಿಸಿಲಷ್ಟೇ ಇಲ್ಲ, ಅಧಿಕಾರಶಾಹಿಯ ಅಹಂಕಾರ ಮತ್ತು ಭ್ರಷ್ಟಾಚಾರದ ಕೆಂಡವೂ ಧಗಧಗಿಸುತ್ತಿದೆ. ಕುಕನೂರು ತಾಲೂಕು ಪಂಚಾಯತ್ ಎಂಬುದು ಈಗ ಜನಸೇವೆಯ ಕೇಂದ್ರವಾಗಿ ಉಳಿದಿಲ್ಲ, ಬದಲಿಗೆ ಅದು ಅಪ್ಪಟ ‘ಸೆಟಲ್ಮೆಂಟ್’ ಅಡ್ಡೆಯಾಗಿ ಬದಲಾಗಿರುವುದು ಅಕ್ಷರಶಃ ದುರಂತ!

ಲೂಟಿ ಪುರಾಣದ ಅಸಲಿ ಮುಖವಾಡ!
ನೋಡಿ ಓದುಗರೇ,ಇಟಗಿ ಸೇರಿದಂತೆ ಮಸಬಹಂಚಿನಾಳ,ಶೀರೂರ,ಭಾನಾಪೂರ,ರಾಜೂರ,ಹಿರೇಬಿಡನಾಳ,ಕುದರಿಮೊತಿ,ಮಂಗಳೂರ,ಬೆಣಕಲ್,ಮಂಡಲಗೇರಿ,ತಳಕಲ್,ಯರೇಹಂಚಿನಾಳ ಗ್ರಾಮ ಪಂಚಾಯತ್‌ಗಳಲ್ಲಿ ‘ನರೇಗಾ’ ಯೋಜನೆಯಡಿ ನಡೆದಿದೆ ಎನ್ನಲಾದ ಆ ಹಗರಣವಿದೆಯಲ್ಲ, ಅದು ಬರೀ ಅಂಕಿ-ಅಂಶಗಳ ಆಟವಲ್ಲ; ಅದು ಬಡವರ ಹೊಟ್ಟೆಗೆ ಹಾಕಿದ ಕನ್ನ! 2020ರಿಂದ 2024ರ ವರೆಗೆ ನಡೆದ ಈ ವ್ಯವಸ್ಥಿತ ಲೂಟಿಯ ವಿರುದ್ಧ ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ ಅವರು ಏಪ್ರಿಲ್ 6ರಂದು ‘ಖಡಕ್’ ಆದೇಶ ನೀಡಿದ್ದರೂ, ಕುಕನೂರಿನ ಆಯಕಟ್ಟಿನ ಜಾಗದಲ್ಲಿ ಕುಳಿತಿರುವ ಇಓ ಸಂತೋಷ್ ಬಿರಾದಾರ್ ಮತ್ತು ಎಡಿ ಶರಣಪ್ಪ ಕೆಳಗಿನಮನಿ ಅವರಿಗೆ ಆ ಆದೇಶ ಕೇವಲ ಕಸದ ಬುಟ್ಟಿಗೆ ಎಸೆಯುವ ಕಾಗದದ ಚೂರಿನಂತೆ ಕಂಡಿದೆ!

ಅಧಿಕಾರ ಎನ್ನುವ ಅಮಲು ಮತ್ತು ‘ಕಪ್ಪು ಕಾಣಿಕೆ’!
ದೂರುದಾರರು ನ್ಯಾಯ ಕೇಳಲು ಹೋದರೆ, ಅಲ್ಲಿ ಸಿಗುವ ಉತ್ತರಗಳು ಸಾಮಾಜಿಕ ಕಾರ್ಯಕರ್ತರನ್ನೇ ಲೇವಡಿ ಮಾಡುವಂತಿವೆ. ಕೊಪ್ಪಳ ಜಿಲ್ಲಾ ಪಂಚಾಯತಿಯ ನರೇಗಾ ಶಾಖೆಯ ಶಾಂತರಾಜ ಎಂಬ ಸಿಬ್ಬಂಧಿಗೆ ಏಕವಚನದಲ್ಲಿ ಸಂಬೋಧಿಸುವ ಈ ‘ಅಧಿಕಾರ ಪಿಪಾಸುಗಳು’, ದೂರುದಾರರೊಂದಿಗೆ “ನಾವು ಮೇಲಿನವರಿಗೆ ಕಪ್ಪು ಕಾಣಿಕೆ ಮುಟ್ಟಿಸಿದ್ದೇವೆ, ಎಲ್ಲವೂ ರಾಜಿಯಾಗಿದೆ, ನಮಗೆ ಯಾರೂ ಏನೂ ಮಾಡಲಾಗದು” ಎಂದು ಎದೆಯುಬ್ಬಿಸಿ ಹೇಳುತ್ತಿದ್ದಾರೆ ಎಂದರೆ, ಇವರ ಅಟ್ಟಹಾಸ ಎಲ್ಲಿಗೆ ತಲುಪಿರಬಹುದು ಊಹಿಸಿ! ಕೊಪ್ಪಳಕ್ಕೆ ಕಳಂಕವಾಗಿರುವ ಇಂತಹ ಅಧಿಕಾರಿಗಳು ವರ್ಷಗಟ್ಟಲೆ ಇಲ್ಲೇ ಅಂಟಿಕೊಂಡಿರುವುದರ ಹಿಂದೆ ಯಾವುದೋ ಬಲವಾದ ‘ಭ್ರಷ್ಟ ಬೇರು’ ಇರುವುದು ಸ್ಪಷ್ಟ.
ಜಿಲ್ಲಾ ಪಂಚಾಯತ್‌ನಲ್ಲೇ ಇದ್ದಾರೆ ‘ವಿಭೀಷಣರು’?!
ಕುಕನೂರು ತಾಲೂಕು ಪಂಚಾಯತ್ ಅಧಿಕಾರಿಗಳ ಈ ದರ್ಪ ಮತ್ತು ನಿರ್ಲಕ್ಷ್ಯದ ಹಿಂದೆ ಜಿಲ್ಲಾ ಪಂಚಾಯತ್‌ನ ಒಬ್ಬ ‘ಶಕ್ತಿ’ಯ ಕೈವಾಡವಿದೆ ಎಂಬ ಆಘಾತಕಾರಿ ಮಾಹಿತಿ ‘ರಣಬೇಟೆ’ಗೆ ಲಭ್ಯವಾಗಿದೆ. ಜಿಲ್ಲಾ ಪಂಚಾಯತ್‌ನ ಆಯಾಕಟ್ಟಿನ ಹುದ್ದೆಯಲ್ಲಿರುವ ಅವರೇ ಈ ಎಲ್ಲಾ ಅವಾಂತರಗಳಿಗೆ ಮೂಲ ಕಾರಣ ಎಂದು ಇಲಾಖೆಯ ಒಳಗಿನ ಕೆಲವು ಪ್ರಾಮಾಣಿಕ ಅಧಿಕಾರಿಗಳು ಗುಸುಗುಸು ಎನ್ನುತ್ತಿದ್ದಾರೆ. ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು, “ನಮ್ಮ ಹೆಸರನ್ನು ಮಾತ್ರ ಗೌಪ್ಯವಾಗಿಡಿ, ಇಲ್ಲದಿದ್ದರೆ ನಮ್ಮನ್ನು ಇಲ್ಲಿ ಕೆಲಸ ಮಾಡಲು ಬಿಡುವುದಿಲ್ಲ. ಆ ವ್ಯಕ್ತಿಯ ಅಭಯ ಹಸ್ತವಿರುವುದರಿಂದಲೇ ಕುಕನೂರಿನ ಮತ್ತು ಉಳಿದ ತಾಲೂಕಿನ ಅಧಿಕಾರಿಗಳು ಈ ಮಟ್ಟಕ್ಕೆ ಕುಣಿಯುತ್ತಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ. ಅಂದರೆ, ಬೇಲಿಯೇ ಎದ್ದು ಹೊಲ ಮೇಯುವ ಕಥೆ ಇದು!

ಸೋಮಾರಿ ಸಾಹೇಬರ ‘ಮೌನ’ಕ್ಕೆ ಬೆಲೆ ಎಷ್ಟು? ಆಡಳಿತವೀಗ ನಗೆಪಾಟಲು!
ಈ ಇಡೀ ಹಗರಣದಲ್ಲಿ ಅತ್ಯಂತ ವಿಚಿತ್ರ ಮತ್ತು ಅಸಹ್ಯಕರ ಸಂಗತಿ ಎಂದರೆ, ಯಾರಿಗೆ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಲು ಖುದ್ದು ಜಿಲ್ಲಾ ಪಂಚಾಯತ್ ಸಿಇಓ ಆದೇಶಿಸಿದ್ದರೋ, ಆ ಕುಕನೂರು ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್ ಅವರು ಅಕ್ಷರಶಃ ಮೌನಕ್ಕೆ ಶರಣಾಗಿದ್ದಾರೆ!
ನೋಡಿ ಸಾಹೇಬರೇ, ಆಡಿಟ್‌ಗೆ ಸಂಬಂಧಿಸಿದ ಪ್ರತಿ ಪೈಸೆ ಲೆಕ್ಕಾಚಾರಕ್ಕೂ, ಅಲ್ಲಿ ನಡೆಯುವ ಪ್ರತಿಯೊಂದು ಆಗು-ಹೋಗುಗಳಿಗೂ ನೀವೇ ನೇರ ಹೊಣೆ ಎಂಬ ಕನಿಷ್ಠ ಜ್ಞಾನ ನಿಮಗಿಲ್ಲವೇ? ಅಥವಾ ಆ ಜ್ಞಾನವನ್ನು ಯಾವುದೋ ‘ಅಮಲು’ ಅಡಗಿಸಿಟ್ಟಿದೆಯೇ? ಸಿಇಓ ಅವರಿಂದಲೇ ನೋಟಿಸ್ ಬಂದಿದ್ದರೂ, ಈ ಬಿರಾದಾರ್ ಅವರ ‘ಅಹಂಕಾರ’ ಮತ್ತು ‘ನಿರ್ಲಕ್ಷ್ಯ’ದ ಪರಾಕಾಷ್ಠೆ ಎಷ್ಟು ದೊಡ್ಡದಿದೆ ಎಂದರೆ, ಅದಕ್ಕೆ ತಡೆಗೋಡೆಯೇ ಇಲ್ಲದಂತಾಗಿದೆ.
ಒಬ್ಬ ಜವಾಬ್ದಾರಿಯುತ ಅಧಿಕಾರಿಯ ಮೌನ ಎಂದರೆ ಅದು ಒಪ್ಪಿಕೊಂಡ ಅಪರಾಧವೋ ಅಥವಾ ತನಿಖೆಯನ್ನು ಹಳ್ಳ ಹಿಡಿಸುವ ಕುತಂತ್ರವೋ? ಸಾರ್ವಜನಿಕ ವಲಯದಲ್ಲಂತೂ ಇವರ ಈ ‘ಸೋಮಾರಿತನ’ ಮತ್ತು ‘ಬೇಜವಾಬ್ದಾರಿತನ’ ಈಗ ದೊಡ್ಡ ನಗೆಪಾಟಲಿಗೆ ಕಾರಣವಾಗಿದೆ. ಕಚೇರಿಗೆ ಬರುವ ಜನ ಈಗ ಇವರನ್ನು ಕಂಡು ಕೈ ತೋರಿಸಿ ನಗುತ್ತಿದ್ದಾರೆ! ಆಡಳಿತ ಯಂತ್ರವನ್ನು ಹೀಗೆ ತುಕ್ಕು ಹಿಡಿಸುತ್ತಾ, ಕುರ್ಚಿಗೆ ಅಂಟಿಕೊಂಡು ಕೂತಿರುವ ಇಂತಹ ಅಧಿಕಾರಿಗಳಿಂದ ಕೊಪ್ಪಳ ಜಿಲ್ಲೆಗೆ ಯಾವ ಕಾಲಕ್ಕೆ ಮುಕ್ತಿ ಸಿಗುವುದೋ ಆ ದೇವರೇ ಬಲ್ಲ!
ಸಂತೋಷ್ ಬಿರಾದಾರ್ ಅವರೇ, ನಿಮ್ಮ ಈ ಮೌನ ಅಧಿಕಾರದ ಸೊಕ್ಕೋ ಅಥವಾ ಹಗರಣದ ಹೂತು ಹಾಕುವ ತಂತ್ರವೋ? ಸಾರ್ವಜನಿಕರ ಈ ಪ್ರಶ್ನೆಗೆ ಈಗಲಾದರೂ ತುಟಿ ಬಿಚ್ಚುತ್ತೀರಾ?

ಸಿಇಓ ಅವರ ‘ಒಂದು ವಾರದ’ ಗಡುವು!
ಈ ಎಲ್ಲಾ ಬೆಳವಣಿಗೆಗಳ ನಡುವೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ದೂರುದಾರರೊಂದಿಗೆ ಸಂವಾದ ನಡೆಸಿದ್ದಾರೆ. ತಮ್ಮ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳುವ ಭರವಸೆ ನೀಡಿರುವ ಅವರು, “ಒಂದು ವಾರದೊಳಗೆ ಆ 12 ಗ್ರಾಮ ಪಂಚಾಯತ್‌ಗಳ ದೋಷಾರೋಪಣ ಪಟ್ಟಿಯನ್ನು ಸಲ್ಲಿಸುವಂತೆ ದೂರವಾಣಿ ಕರೆ ಮತ್ತು ಆಡಳಿತಾತ್ಮಕ ಗ್ರೂಪ್‌ಗಳಲ್ಲಿ ಮೌಖಿಕವಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಈ ವ್ಯವಸ್ಥೆಯನ್ನು ಸರಿಪಡಿಸಿಯೇ ಸಿದ್ಧ, ನನ್ನ ಮೇಲೆ ನಂಬಿಕೆ ಇಡಿ” ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ವರ್ಣಿತ್ ನೇಗಿ ಅವರೇ, ನಿಮ್ಮ ಪ್ರಾಮಾಣಿಕತೆಯ ಮೇಲೆ ಜನರಿಗೆ ನಂಬಿಕೆಯಿದೆ. ಆದರೆ, ನಿಮ್ಮ ಕಚೇರಿಯಲ್ಲೇ ಕುಳಿತು ‘ಕಪ್ಪು ಕಾಣಿಕೆ’ಯ ಆಟವಾಡುತ್ತಿರುವವರು ಮತ್ತು ಕುಕನೂರಿನಲ್ಲಿ ಅಟ್ಟಹಾಸ ಮೆರೆಯುತ್ತಿರುವ ಈ ಭ್ರಷ್ಟ ಅಧಿಕಾರಿಗಳ ಜಾಲವನ್ನು ನೀವು ಹೇಗೆ ಸೀಳುತ್ತೀರಿ? ಹಲವು ವರ್ಷಗಳಿಂದ ಇಲ್ಲೇ ಬಿಡು ಬಿಟ್ಟು ಜಿಲ್ಲೆಯ ಆಡಳಿತಕ್ಕೆ ಹುಳು ಹಿಡಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೀರಾ?
ಸಂಚಿಕೆ ಮುಂದುವರೆಯುತ್ತದೆ…..

