ದದೇಗಲ್ ಭೂಗಳ್ಳರ ‘ಸದ್ದಿಲ್ಲದ’ ಸಾಮ್ರಾಜ್ಯಕ್ಕೆ ಸಿದ್ದರಾಮೇಶ್ವರರ ಸಿಡಿಲು!
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಏ:13 ಸಂಚಿಕೆ- 01
ಕೊಪ್ಪಳ: ಇದು ಹಣದ ಹಪಾಹಪಿಗೆ ಬಿದ್ದು ನಿಸರ್ಗದ ಕತ್ತು ಹಿಸುಕಿದ ಪಾಪಿಗಳ ಕಥೆ. ಅಧಿಕಾರದ ಮದ ಮತ್ತು ಕಾಂಕ್ರೀಟ್ ಗೋಡೆಗಳ ನಡುವೆ ಸರ್ಕಾರಿ ಹಳ್ಳವೊಂದನ್ನು ಸಮಾಧಿ ಮಾಡಿ, ಅದರ ಮೇಲೆ ರಕ್ತಸಿಕ್ತ ಲಾಭದ ಬಡಾವಣೆ ಕಟ್ಟಲು ಹೊರಟ ಭೂಗಜಗಳ ಕರಾಳ ಮುಖವಾಡ ಈಗ ಕಳಚಿದೆ. ಕೊಪ್ಪಳ ಜಿಲ್ಲೆಯ ದದೇಗಲ್ ಗ್ರಾಮದ ಸರ್ವೆ ನಂಬರ್ 69/ ಹಿಸ್ಸಾ 03 ರ ಸುಮಾರು 5 ಎಕರೆ 22 ಗುಂಟೆ ಜಮೀನಿನಲ್ಲಿ ಮತ್ತು ಜಮೀನಿನ ಪಕ್ಕದಲ್ಲಿ ನಡೆಯುತ್ತಿರುವ ಈ ಭೀಭತ್ಸ ಭೂಹಗರಣ ಜಿಲ್ಲಾಡಳಿತದ ನಿದ್ದೆಗೆಡಿಸಿದೆ.

ನಕ್ಷೆಯಲ್ಲಿ ಹಳ್ಳ… ನೆಲದ ಮೇಲೆ ಶೆಡ್!
ದಿಶಾಂಕ್ ಎಂಬ ಆಧುನಿಕ ನಕ್ಷೆಗಳು ಬೊಟ್ಟು ಮಾಡಿ ತೋರಿಸುತ್ತಿರುವ ಆ ನೈಸರ್ಗಿಕ ಹಳ್ಳ ಇಂದು ಅಲ್ಲಿಲ್ಲ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 67 ಮತ್ತು 68ರ ಅಡಿಯಲ್ಲಿ ರಕ್ಷಿಸಲ್ಪಟ್ಟ ಜಲಮೂಲವನ್ನೇ ಮಣ್ಣು ಮಾಡಿ ಮುಚ್ಚಲಾಗಿದೆ. ಆಶ್ಚರ್ಯವೆಂದರೆ, ಹಳ್ಳವಿದ್ದ ಜಾಗದಲ್ಲೇ ಅಕ್ರಮವಾಗಿ ಶೆಡ್ ನಿರ್ಮಿಸಿ, ಅದಕ್ಕೆ ಸಿಸಿ ಕ್ಯಾಮೆರಾಗಳ ಕಾವಲು ಹಾಕಿರುವುದು ಇವರ ಕಳ್ಳಾಟಕ್ಕೆ ಹಿಡಿದ ಕನ್ನಡಿ.
ಮಾರಾಟಗಾರ ಮತ್ತು ಖರೀದಿದಾರರ ‘ನಾ ನರಿಯೆ’ ನಾಟಕ!
ದೂರುದಾರರಾದ ಭಾಗ್ಯನಗರದ ಸಾಮಾಜಿಕ ಕಾರ್ಯಕರ್ತ ಕೆ. ಬಿ. ಮ್ಯಾಗಳಮನಿ ಅವರ ಪ್ರಕಾರ, ಈ ಪಾಪದ ಕೂಸಿಗೆ ಅಸಲಿ ತಂದೆ-ತಾಯಿ ಯಾರು? ಈ ಜಮೀನನ್ನು ಅಶ್ವಿನಿ ಎಂಬುವವರಿಂದ ಖರೀದಿಸಿದ ತಳಕಲ್ ನಿವಾಸಿ ಮಲ್ಲಿಕಾರ್ಜುನ ಮೇಟಿಗೌಡ್ರು ಈಗ “ಹಳ್ಳಕ್ಕೂ ನಮಗೂ ಸಂಬಂಧವಿಲ್ಲ” ಎಂಬ ಸುಳ್ಳಿನ ಸೋಗು ಹಾಕುತ್ತಿದ್ದಾರೆ.. ಈಗ ಅಧಿಕಾರಿಗಳ ನೋಟಿಸ್‌ಗೆ ಉತ್ತರಿಸಿರುವ ಮಾಲೀಕರು, “ನಾವು ಜಮೀನನ್ನು ಮಾತ್ರ ಖರೀದಿಸಿದ್ದೇವೆ, ಆದರೆ ಹಳ್ಳದ ಜಾಗದಲ್ಲಿ ಶೆಡ್ ಕಟ್ಟಿರುವುದು ಇವರೇ ಎಂಬ ಸತ್ಯ ಸುಳ್ಳಾಗಲು ಸಾಧ್ಯವೇ? ಸುಪ್ರೀಂ ಕೋರ್ಟ್‌ನ ಹತ್ತಾರು ಆದೇಶಗಳನ್ನು ಗಾಳಿಗೆ ತೂರಿ ಇಲ್ಲಿ ಅಕ್ರಮದ ಅರಮನೆ ಕಟ್ಟಲಾಗುತ್ತಿದೆ.ಹಳ್ಳವನ್ನು ಮುಚ್ಚಿದ್ದು ಖರೀದಿಸಿದವರೋ ಅಥವಾ ಮಾರಿದವರೋ? “ಯಾರೇ ಮುಚ್ಚಿರಲಿ, ನಿಸರ್ಗದ ಹರಿವನ್ನು ತಡೆದಿರುವುದು ಅಕ್ಷಮ್ಯ ಅಪರಾಧ” ಎಂಬುದು ದೂರುದಾರರ ಖಡಕ್ ವಾದವಾಗಿದೆ.

ಕಂದಾಯ ಕಚೇರಿಯ ‘ಕತ್ತಲು’ ಮತ್ತು ಶರಣಪ್ಪ ಅವರ ಚಾಟಿ!
ಸ್ಥಳೀಯ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಮೂಗಿನ ಕೆಳಗೇ ಈ ಅಟ್ಟಹಾಸ ನಡೆದಿದೆ. ಇವರು ಕುರುಡಾಗಿದ್ದರೋ ಅಥವಾ ಮಾಫಿಯಾದ ಮಂಚದಡಿ ಬಿದ್ದಿದ್ದರೋ ಎಂಬುದು ತನಿಖೆಯಾಗಬೇಕಿದೆ. ಇತ್ತ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಕೆಜೆಪಿ ಅನುಮೋದನೆಗೆ ಹಸಿರು ನಿಶಾನೆ ತೋರಿದ್ದರೂ, ಸಾಮಾಜಿಕ ಕಾರ್ಯಕರ್ತೆ ಕೆ. ಬಿ. ಮ್ಯಾಗಳಮನಿ ನೀಡಿದ ದೂರಿನ ಮೇರೆಗೆ ಆಯುಕ್ತರಾದ ಶರಣಪ್ಪ ಅವರು ಅನುಮೋದನೆಯನ್ನು ತಡೆಹಿಡಿದು ಭೂಗಳ್ಳರ ಸೊಕ್ಕು ಮುರಿದಿದ್ದಾರೆ.

ಕೋಳೂರು ಗ್ರಾಮ ಪಂಚಾಯಿತಿಗೆ ನೇರ ಎಚ್ಚರಿಕೆ!
ಸ್ಥಳೀಯ ಮಟ್ಟದಲ್ಲಿ ನಡೆಯುವ ಈ ಅಕ್ರಮ ಕಾಮಗಾರಿಯನ್ನು ತಡೆಯುವ ಪೂರ್ಣ ಅಧಿಕಾರ ಕೋಳೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಇದೆ. ಯಾವುದೇ ಅನುಮತಿಯಿಲ್ಲದೆ ನಡೆಯುತ್ತಿರುವ ಈ ಬಡಾವಣೆಯ ನಿರ್ಮಾಣ ಕಾರ್ಯವನ್ನು ಕೂಡಲೇ ಸ್ಥಗಿತಗೊಳಿಸುವಂತೆ ನೋಟಿಸ್ ಜಾರಿ ಮಾಡಬೇಕಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಅಕ್ರಮ ಗೋಡೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಆಗುವ ಎಲ್ಲಾ ಅನಾಹುತಗಳಿಗೆ ಅವರೇ ನೇರ ಹೊಣೆಗಾರರಾಗಬೇಕಾಗುತ್ತದೆ.
ಜಿಲ್ಲಾಡಳಿತವು ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೆ, ತಕ್ಷಣವೇ ಈ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಅಕ್ರಮ ಕಾಮಗಾರಿಯನ್ನು ನೆಲಸಮ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಸಿದ್ದರಾಮೇಶ್ವರರ ಸಿಡಿಲಬ್ಬರ ಭೂಮಾಫಿಯಾಗೆ ಶುರುವಾಗಿದೆ ನಡುಕ!
ಕೊಪ್ಪಳದ ಪುಣ್ಯಕ್ಕೆ ಅಪರ ಜಿಲ್ಲಾಧಿಕಾರಿಗಳಾಗಿ ಸಿದ್ದರಾಮೇಶ್ವರ ಅಂತಹ ಅಧಿಕಾರಿಗಳು ಬಂದಿದ್ದಾರೆ. ಕೊಪ್ಪಳ ಜಿಲ್ಲೆಗೆ ಅಪರ ಜಿಲ್ಲಾಧಿಕಾರಿಗಳಾಗಿ ಸಿದ್ದರಾಮೇಶ್ವರ ಅವರು ಬಂದ ಮೇಲೆ, ಭೂಗಳ್ಳರ ಆಟಾಟೋಪಗಳಿಗೆ ಬ್ರೇಕ್ ಬೀಳುವ ಕಾಲ ಹತ್ತಿರ ಬಂದಿದೆ. ಅವರ ಕಾರ್ಯವೈಖರಿ ಮತ್ತು ಈ ಪ್ರಕರಣದಲ್ಲಿ ಅವರು ತೋರಿಸುತ್ತಿರುವ ನಿಷ್ಠೆ ಕಂಡರೆ, ಜಿಲ್ಲೆಯ ಭೂಗಳ್ಳರಿಗೆ ಚಳಿಜ್ವರ ಶುರುವಾದಂತಿದೆ. ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗಿದ್ದ ಪ್ರಕರಣಕ್ಕೆ ಸಿದ್ದರಾಮೇಶ್ವರ ಅವರು ಜೀವ ತುಂಬಿದ್ದಾರೆ. ಮುಂದಿನ ದಿನಗಳಲ್ಲಿ ಇವರಂತಹ ನಿಷ್ಠಾವಂತ ಅಧಿಕಾರಿಗಳೇ ಜಿಲ್ಲಾಧಿಕಾರಿಗಳಾಗಿ ಬಂದರೆ, ಕೊಪ್ಪಳ ಜಿಲ್ಲೆಯು ಇಂತಹ ಭೂಗಳ್ಳರಿಂದ ಸಂಪೂರ್ಣ ಮುಕ್ತಿ ಪಡೆಯುವುದರಲ್ಲಿ ಸಂಶಯವಿಲ್ಲ. ಇವರ ಈ ನಿರ್ದಾಕ್ಷಿಣ್ಯ ಕ್ರಮದಿಂದಾಗಿ ಕೊಪ್ಪಳಕ್ಕೆ ಒಂದು ಗೌರವದ ಹೆಸರು ಬರುವುದಲ್ಲದೆ, ಸಾಮಾಜಿಕ ಹೋರಾಟಗಾರರಿಗೂ ಆನೆ ಬಲ ಬಂದಂತಾಗಿದೆ.
ಜಿಲ್ಲಾಡಳಿತಕ್ಕೆ ‘ರಣಬೇಟೆ’ ವೆಬ್ ನ ಕಿವಿಮಾತು
ಕೃಷಿಯೇತರ ಜಮೀನು ಪರಿವರ್ತನೆಯ ಅರ್ಜಿ ಬಂದಾಗ, ತಹಶೀಲ್ದಾರರು ಮತ್ತು ಕಂದಾಯ ನಿರೀಕ್ಷಕರು ನೀಡುವ ವರದಿಗಳನ್ನು ಕಣ್ಣು ಮುಚ್ಚಿ ನಂಬಬೇಡಿ. ಅರ್ಜಿಯಲ್ಲಿರುವ ಜಮೀನು ಸರ್ಕಾರಿ ಹಳ್ಳವೋ, ಕಾಲುವೆಯೋ ಅಥವಾ ಕಂದಾಯ ಭೂಮಿಯೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ.ಬಡಾವಣೆಗಳ ಹೆಸರಿನಲ್ಲಿ ನಿಸರ್ಗದ ನಾಶ ಮಾಡುವ ಇಂತಹ ದಂಧೆಗಳಿಗೆ ಕಡಿವಾಣ ಹಾಕಿ.
ದದೇಗಲ್ ಹಳ್ಳದ ಈ ಹಗ್ಗಜಗ್ಗಾಟದಲ್ಲಿ ನ್ಯಾಯ ಗೆಲ್ಲಲಿದೆಯೇ? ಮಾಫಿಯಾದ ಹಣದ ಬಲದ ಮುಂದೆ ಸಿದ್ದರಾಮೇಶ್ವರ ಅಂತಹ ಅಧಿಕಾರಿಗಳ ನೈತಿಕ ಶಕ್ತಿ ಜಯಿಸುತ್ತದೆಯೇ? ಕಾದು ನೋಡೋಣ.
ಸಂಚಿಕೆ ಮುಂದುವರೆಯುತ್ತದೆ….

