ಹಳ್ಳ ನುಂಗಿದ ‘ಭೂ’ ರಕ್ಕಸರಿಗೆ ಕಂದಾಯ ಇಲಾಖೆಯೇ ಕಾವಲು?

ರದ್ದಾದ ಭೂ ಪರಿವರ್ತನೆಗೆ ಆರ್.ಐ ಸುರೇಶ ನೀಡಿದರೇ ಮರುಜೀವ?

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮೇ:14 (ಸಂಚಿಕೆ-02)

ಕೊಪ್ಪಳ: ಇದು ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಪಕ್ಕದಲ್ಲಿ ಹರಿಯುತ್ತಿದ್ದ ನೈಸರ್ಗಿಕ ಹಳ್ಳವೊಂದನ್ನು ಮಣ್ಣು ಮಾಡಿ, ಅದರ ಮೇಲೆ ಅಕ್ರಮದ ಅರಮನೆ ಕಟ್ಟಲು ಹೊರಟ ಭೂಗಜಗಳ ಅಸಲಿ ಮುಖವಾಡ ಈಗ ಕಳಚಿದೆ. ಸರ್ಕಾರಿ ಹಳ್ಳಕ್ಕೆ ಮಣ್ಣು ಮುಚ್ಚಿದ ‘ಭೂ’ ರಕ್ಕಸರ ಅಟ್ಟಹಾಸದ ಬೆನ್ನಲ್ಲೇ, ಈಗ ಕಂದಾಯ ಇಲಾಖೆಯ ಒಳಗಿನ ‘ಕೈವಾಡ’ಗಳು ಬಯಲಾಗುತ್ತಿವೆ. ಈ ಹಗರಣದ ಬಗ್ಗೆ ತಹಶೀಲ್ದಾರಾದ ಬಸವರಾಜ ತೆನ್ನಳ್ಳಿ ಅವರಿಗೆ ವರದಿ ಸಲ್ಲಿಸಿರುವ ಕಂದಾಯ ನಿರೀಕ್ಷಕರಾದ ಸುರೇಶ ಅವರು ತಮ್ಮ ವರದಿಯಲ್ಲಿ ಸತ್ಯವನ್ನು ಅರೆಬರೆ ಉಗುಳಿ, ಅಸಲಿ ಸತ್ಯಕ್ಕೆ ಮಣ್ಣು ಎರಚುವ ಸಾಹಸ ಮಾಡಿದ್ದಾರೆ.ಆದರೆ, ಈ ಅಕ್ರಮವನ್ನು ತಡೆಯಬೇಕಾದ ಕಂದಾಯ ಇಲಾಖೆಯ ಒಳಗೇ ಕುಳಿತು ‘ಭೂ’ ಬಿತ್ತುತ್ತಿರುವ ಅಧಿಕಾರಿಗಳ ಲೀಲೆಗಳು ಈಗ ಬಯಲಿಗೆ ಬರುತ್ತಿವೆ.


ಯಮಧರ್ಮರಾಯನ ದರ್ಬಾರ್ ಮತ್ತು ತಹಶೀಲ್ದಾರ್ ಕಚೇರಿಯ ನರಕಲೋಕ!
​ಯಾವುದೇ ದೂರು ಹೊತ್ತು ತಹಶೀಲ್ದಾರ್ ಕಚೇರಿಗೆ ಹೋದರೆ, ಅಲ್ಲಿನ ಅಧಿಕಾರಿಗಳನ್ನು ಮಾತನಾಡಿಸುವುದು ನರಕಲೋಕದ ಯಮಧರ್ಮರಾಯನನ್ನು ಎದುರಿಸಿದಂತೆ ಭಾಸವಾಗುತ್ತದೆ. ದೂರುದಾರರೊಂದಿಗೆ ಸೌಜನ್ಯದಿಂದ ಮಾತನಾಡುವುದನ್ನು ಮರೆತಿರುವ ಇಲ್ಲಿನ ಸಿಬ್ಬಂದಿ, ಸದಾ ಸಿಟ್ಟಿನಿಂದಲೇ ಇರುತ್ತಾರೆ. ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ ಅವರು ಈ ಪ್ರಕರಣದ ಮೇಲೆ ವೈಯಕ್ತಿಕ ಗಮನ ಹರಿಸಿ ತನಿಖೆ ನಡೆಸಲು ತಹಶೀಲ್ದಾರರಿಗೆ ಪತ್ರ ಬರೆದಿದ್ದರೂ, ಆ ಪತ್ರ ಕಸದ ಬುಟ್ಟಿಗೆ ಸೇರಿದೆಯೋ ಅಥವಾ ಅಧಿಕಾರಿಗಳ ಮೇಜಿನ ಅಡಿಯಲ್ಲಿ ‘ಮಲಗಿದೆಯೋ’ ಎಂಬ ಸಂಶಯ ದೂರುದಾರರಾದ ಕೆ.ಬಿ. ಮ್ಯಾಗಳಮನಿಯವರನ್ನು ಕಾಡುತ್ತಿದೆ.


ಕಂದಾಯ ನಿರೀಕ್ಷಕರಾದ ಸುರೇಶರವರ ‘ಕಾಗದದ’ ಸುಳ್ಳುಗಳು!
​ದಿನಾಂಕ 12-05-2026 ರಂದು ಕಂದಾಯ ನಿರೀಕ್ಷಕರು ಸಲ್ಲಿಸಿರುವ ವರದಿಯು ಭೂಮಾಫಿಯಾದೊಂದಿಗೆ ಇಲಾಖೆ ಹೇಗೆ ಕೈಜೋಡಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮಲ್ಲಿಕಾರ್ಜುನ ಮೇಟಿಗೌಡ್ರು ಎಂಬುವವರು ಜಮೀನಿನ ಪಕ್ಕದಲ್ಲಿ ಸರ್ಕಾರಿ ಹಳ್ಳವನ್ನು ಮುಚ್ಚಿಹಾಕಿ ಸದರಿ ಜಮೀನಿನ ಸುತ್ತಲೂ ಕಾಂಪೌಂಡ್ ಮತ್ತು ಶೆಡ್ ನಿರ್ಮಿಸಿರುವುದು ಹೌದು ಎಂದು ವರದಿಯಲ್ಲಿ ಒಪ್ಪಿಕೊಳ್ಳಲಾಗಿದೆ. ಸುರೇಶರವರು ಮಾಲೀಕರನ್ನು ವಿಚಾರಣೆ ಮಾಡುವ ಸಮಯದಲ್ಲಿ ಮಾಲೀಕರು ಹೇಳಿರುವಂತೆ ಮುಚ್ಚಿರುವುದು ಇವರಲ್ಲ ನಾವು ಜಮೀನು ಖರೀದಿ ಮಾಡುವುದಕ್ಕಿಂತ ಮುಂಚಿತವಾಗಿಯೇ ಸರ್ಕಾರಿ ಹಳ್ಳವನ್ನು ಮುಚ್ಚಿಹಾಕಿ ಕಾಂಪೌಂಡ್ ಮತ್ತು ಶೆಡ್ ನಿರ್ಮಿಸಿರುತ್ತಾರೆ ಎಂದು ತಿಳಿಸಿರುತ್ತಾರೆ. ಅಂದರೇ ಮುಂಚಿರುವುದು ಹಿಂದಿನ ಮಾಲೀಕರಾದ ಶ್ರೀಮತಿ ಅಶ್ವೀನಿ ಅವರು ಎಂದಾಯಿತು ಅಲ್ಲವೇ! ಅದಲ್ಲದೇ ಸುರೇಶರವರ ಪ್ರಕಾರ ಜಮೀನು ಭೂಪರಿವರ್ತನೆಯಾಗಿದೆ ಆ ಜಾಗದಲ್ಲಿ ಮಾತ್ರ ರಸ್ತೆ ಹಾಗೂ ಚರಂಡಿ ಕಾಮಗಾರಿ ನಿರ್ಮಿಸುತ್ತಿರುವುದು ಮೇಲ್ನೋಟಕ್ಕೆ ಇವರ ಪರಿಶೀಲನೆಯಿಂದ ಕಂಡುಬಂದಿದೇ ಎಂದು ವರದಿಯಲ್ಲಿ ತಿಳಿಸಿರುತ್ತಾರೆ.


ರದ್ದಾದ ಭೂ ಪರಿವರ್ತನೆಗೆ ಜೀವ ತುಂಬಿದ ಕಂದಾಯ ನಿರೀಕ್ಷಕರಾದ ಆರ್‌ ಐ ಸುರೇಶ ! ತಹಶೀಲ್ದಾರ ಅವರಿಗೆ ವರದಿಯಲ್ಲಿ ಕಂದಾಯ ನಿರೀಕ್ಷಕರು, “ಸದರಿ ಜಮೀನು ಭೂ ಪರಿವರ್ತನೆಯಾಗಿರುತ್ತದೆ” ಎಂದು ಉಲ್ಲೇಖಿಸಿರುವುದು ಇಡೀ ವ್ಯವಸ್ಥೆಗೆ ಬಡಿದ ಶಾಪದಂತಿದೆ ಜಿಲ್ಲಾಧಿಕಾರಿಗಳ ಕಚೇರಿಯೇ ಈ ಜಮೀನಿನ ಭೂ ಪರಿವರ್ತನಾ ಅರ್ಜಿಯನ್ನು ಸರ್ಕಾರದ ಹೊಸ ನಿಯಮಗಳ ಅನ್ವಯ ಮಾನ್ಯ ಜಿಲ್ಲಾಧಿಕಾರಿಗಳು ಈಗಾಗಲೇ ತಿರಸ್ಕರಿಸಿದ್ದಾರೆ. ಕಂದಾಯ ನಿರೀಕ್ಷಕರು ಮಾತ್ರ “ಜಮೀನು ಭೂ ಪರಿವರ್ತನೆಯಾಗಿದೆ” ಎಂಬ ಹಸಿ ಸುಳ್ಳನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಆರ್.ಐ ಗೆ ಮಾಹಿತಿ ಇಲ್ವಾ? ಅಥವಾ ಹಪಾಹಪಿನಾ? ಹಳ್ಳ ಮುಚ್ಚಿದವರಿಗೆ ‘ಕ್ಲೀನ್ ಚಿಟ್’ ಕೊಡುವ ಹುನ್ನಾರವೇ? ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ತಿರಸ್ಕೃತಗೊಂಡಿರುವ ವಿಷಯ ಇಲಾಖೆಯ ಕೆಳಮಟ್ಟದ ಅಧಿಕಾರಿಗೆ ತಿಳಿದಿಲ್ಲ ಎಂದರೆ ಅದು ಅವರ ಕರ್ತವ್ಯ ನಿರ್ಲಕ್ಷ್ಯದ ಪರಮಾವಧಿ. ಅಥವಾ ಭೂಮಾಫಿಯಾದ ಬಿಸಿಗೆ ಮರುಳಾಗಿ ಇವರು ಅಪರ ಜಿಲ್ಲಾಧಿಕಾರಿಗಳ ಆದೇಶವನ್ನೇ ಹೂತುಹಾಕಲು ಹೊರಟಿದ್ದಾರೆಯೇ? ಹಳ್ಳ ಮುಚ್ಚಿದ ಜಾಗದಲ್ಲಿ ಕೇವಲ ಶೆಡ್ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ಹೇಳುವ ಮೂಲಕ ಕಂದಾಯ ನಿರೀಕ್ಷಕರಾದ ಸುರೇಶರವರು ಭೂಮಾಲೀಕರ ವಕಾಲತ್ತು ವಹಿಸಿದಂತಿದೆ. ನೈಸರ್ಗಿಕ ಹಳ್ಳವನ್ನೇ ನುಂಗಿ ನೀರು ಕುಡಿದಿರುವ ಜಾಗದಲ್ಲಿ ಶೆಡ್ ಕಟ್ಟುವುದು ರೈತರ ಹಿತವೋ ಅಥವಾ ಅಕ್ರಮ ಲೇಔಟ್‌ನ ಭೂಗಜಗಳ ಹಿತವೋ? ಜಿಲ್ಲಾಡಳಿತದ ಕಣ್ಣಿಗೆ ಮಣ್ಣೆರಚಲು ಇಂತಹ ‘ಕಾಗದದ ವರದಿ’ಗಳನ್ನು ಸಿದ್ಧಪಡಿಸುತ್ತಿರುವ ಇವರ ವಿರುದ್ಧ ಮೇಲಧಿಕಾರಿಗಳು ಚಾಟಿ ಬೀಸಬೇಕಿದೆ.

ದೌಲತ್ ಸಾಬ್-ಗವಿಸಿದ್ದಪ್ಪ ಎಂಬ ‘ಮಹಾನ್’ ಭೂಮಾಪಕರು ಈ ‘ಮಹಾನಿರ್ಲಕ್ಷ್ಯ’ದ ಹಿಂದೆ ಅಡಗಿದೆಯೇ ಭೂಮಾಫಿಯಾದ ಕೈವಾಡ? ಸಾಮಾಜಿಕ ಕಾರ್ಯಕರ್ತ ಕೆ.ಬಿ. ಮ್ಯಾಗಳಮನಿಯವರು ದಿನಾಂಕ 01-04-2026 ರಂದೇ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಹಳ್ಳದ ಒತ್ತುವರಿ ಕುರಿತು ದೂರು ನೀಡಿದ್ದರು. ಆದರೆ, ಈ ಮಹಾನ್ ಇಲಾಖೆ ಎಚ್ಚೆತ್ತುಕೊಂಡಿದ್ದೇ 27 ದಿನಗಳ ನಂತರ! ನೂರು ಬಾರಿ ಕಚೇರಿಗೆ ಅಲೆದಾಡಿಸಿ, ದೂರುದಾರರ ಕಾಲಿನ ಸವೆತ ನೋಡಿದ ಮೇಲೆ ಇಲಾಖೆಯ ಭೂಮಾಪಕರಾದ ದೌಲತ್ ಸಾಬ್ ಮತ್ತು ಗವಿಸಿದ್ದಪ್ಪ ಅವರಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪತ್ರ ಬರೆದಿದ್ದಾರೆ. ​ಮೇಲಧಿಕಾರಿಗಳಿಂದ ಪತ್ರ ತಲುಪಿ ಇಂದಿಗೆ 15 ದಿನ ಕಳೆದಿದೆ. ಆದರೆ ಈ ಇಬ್ಬರು ಮಹಾನ್ ಭೂಮಾಪಕರಿಗೆ ಸ್ಥಳ ಪರಿಶೀಲನೆಗೆ ಹೋಗಲು ಇನ್ನು ಮುಹೂರ್ತ ಸಿಕ್ಕಿಲ್ಲ! 15 ದಿನಗಳಿಂದ ಕಚೇರಿಯ ಫೈಲುಗಳ ಮೇಲೆ ಕುಳಿತಿರುವ ಇವರು, ಸ್ಥಳೀಯವಾಗಿ ಒತ್ತುವರಿಯಾದ ಸರ್ಕಾರಿ ಹಳ್ಳವನ್ನು ನೋಡಲು ಹೋಗುವ ಮನಸ್ಸು ಮಾಡಿಲ್ಲ. ಇಂತಹ ಮಹಾನುಭಾವರು ಇಲಾಖೆಯಲ್ಲಿ ಇರುವಾಗ ಸರ್ಕಾರಿ ಜಾಗಗಳು ಮತ್ತು ನೈಸರ್ಗಿಕ ಜಲಮೂಲಗಳು ಉಳಿಯುವುದು ಕಷ್ಟಸಾಧ್ಯ ಬಿಡಿ.

ಕೊಪ್ಪಳ ಜಿಲ್ಲಾಡಳಿತ ಮತ್ತು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ. ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಡಿಲೇ ಮಾಡಲು, ಚೆಂಡನ್ನು ಮತ್ತೆ ಭೂ ದಾಖಲೆಗಳ ಇಲಾಖೆಯ ಅಂಗಳಕ್ಕೆ ಎಸೆಯಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಪ್ರಕರಣವನ್ನು ಭೂ ದಾಖಲೆಗಳ ಇಲಾಖೆಯ ಮೇಲೆ ಹಾಕಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ನ್ಯಾಯದ ಕತ್ತು ಹಿಸುಕುವ ತಂತ್ರವಾಗಿದೆ. ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ ಅವರು ತಕ್ಷಣವೇ ಮಧ್ಯಪ್ರವೇಶಿಸಿ, ಈ ಅಧಿಕಾರಿಗಳ ಕಾಲಹರಣದ ಆಟಕ್ಕೆ ಬ್ರೇಕ್ ಹಾಕಿ, ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕಿದೆ. ಮತ್ತು ಕಂದಾಯ ನಿರೀಕ್ಷಕರಾದ ಸುರೇಶ ಗ್ರಾಮ ಲೆಕ್ಕಾಧಿಕಾರಿಗಳಾದ ನಿಂಗಮ್ಮ ಮತ್ತು ಗ್ರಾಮ ಸಹಾಯಕರಾದ ವೆಂಕಟೇಶ ರವರು ನೀಡಿರುವ ಇಂತಹ ಬೇಜವಾಬ್ದಾರಿಯುತ ವರದಿಗಳೇ ಭೂಗಳ್ಳರಿಗೆ ರಕ್ಷಾಕವಚವಾಗುತ್ತಿವೆ. ಇಂತಹ ಅಧಿಕಾರಿಗಳು ನೀಡುವ ವರದಿಗಳನ್ನು ಕಣ್ಣು ಮುಚ್ಚಿ ನಂಬದೆ, ತಹಶೀಲ್ದಾರರು ಮತ್ತು ಅಪರ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಹಿಂದಿನ ಜಮೀನಿನ ಮಾಲೀಕರ ಮೇಲೆ ಶಿಸ್ತು ಕ್ರಮ ಜರುಗಿಸಬೇಕಿದೆ. ನೈಸರ್ಗಿಕ ಹಳ್ಳವನ್ನು ರಕ್ಷಿಸುವುದು ಕೇವಲ ದೂರುದಾರ ಕೆ.ಬಿ. ಮ್ಯಾಗಳಮನಿಯವರ ಆಶಯವಲ್ಲ, ಅದು ಕಾನೂನಿನ ಅನಿವಾರ್ಯತೆಯೂ ಹೌದು.
​ಮುಂದಿನ ದಿನಗಳಲ್ಲಿ ಈ ‘ವರದಿ’ಯ ಹಣೆಬರಹ ಏನಾಗುತ್ತದೆ? ಸರ್ಕಾರಿ ಹಳ್ಳದ ಉಸಿರು ಉಳಿಯುತ್ತದೆಯೇ? ಕಾದು ನೋಡೋಣ.

ಸಂಚಿಕೆ ಮುಂದುವರೆಯುತ್ತದೆ….

error: Content is protected !!
Scroll to Top