ಹಣದ ಹಪಾಹಪಿಗೆ ಪ್ರಕೃತಿಯ ಕತ್ತು ಹಿಸುಕಿದ ಪಾಪಿಗಳ ಅಟ್ಟಹಾಸದ ಕಥೆ!

ರಣಬೇಟೆಯ ರಣಕಹಳೆಗೆ ಕೊನೆಗೂ ಮಣಿದು ಟೇಪು ಹಿಡಿಯ ಹೊರಟರೇ ‘ಮಹಾನ್’ ಭೂಮಾಪಕರು?

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ:ಮೇ 18 (ಸಂಚಿಕೆ – 03)

ಕೊಪ್ಪಳ: ಇದು ಕಾಸಿನ ಕಾಂಚಾಣಕ್ಕೆ ಪ್ರಕೃತಿಯ ಕತ್ತು ಸೀಳಿದವರ ಕಥೆ ಮಾತ್ರವಲ್ಲ, ಕಾನೂನಿನ ಕಣ್ಣಿಗೆ ಮಣ್ಣೆರಚಲು ಹೋದ ಮಾಫಿಯಾವನ್ನು ಸರಕಾರಿ ದಾಖಲೆಗಳೇ ಹೇಗೆ ಹೆಡೆಮುರಿ ಕಟ್ಟಿ ನಿಲ್ಲಿಸಿವೆ ಎಂಬುದರ ಜ್ವಲಂತ ಸಾಕ್ಷಿ! ಕೊಪ್ಪಳದ ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ರ ಜಮೀನಿನ ಪಕ್ಕದಲ್ಲಿ ನೈಸರ್ಗಿಕವಾಗಿ ಹರಿಯುತ್ತಿದ್ದ ಹಳ್ಳವನ್ನು ಮುಚ್ಚಿ, ಅಲ್ಲಿ ಅಕ್ರಮದ ಕೋಟೆ ಕಟ್ಟಲು ಹೊರಟ ಲೇಔಟ್ ಮಾಲೀಕರ ‘ನಾ ನರಿಯೆ’ ನಾಟಕದ ಮುಖವಾಡ ಈಗ ಸಂಪೂರ್ಣವಾಗಿ ಕಳಚಿ ಬಿಳ್ಳುತ್ತಿದೆ.
​ರಣಬೇಟೆ ವೆಬ್ ನ್ಯೂಸ್ ಬಿಚ್ಚಿಡುತ್ತಿರುವ ಈ ಕರಾಳ ಹಗರಣದ ಸತ್ಯಗಳು ಈಗ ಮೂರು ಪ್ರಮುಖ ಆಯಾಮಗಳಲ್ಲಿ ಸಾಬೀತಾಗಿ ನಿಂತಿವೆ. ಆ ಸ್ಫೋಟಕ ಸತ್ಯಗಳ ಸರಣಿ ಇಲ್ಲಿದೆ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಮತ್ತು ನಗರ ಯೋಜನಾ ಸದಸ್ಯರ ಸ್ಥಳ ಪರಿಶೀಲನೆ ಮತ್ತು ಪತ್ರದ ಬಿಸಿ!
​ಖರೀದಿದಾರ ಮಲ್ಲಿಕಾರ್ಜುನ ಗೌಡ ಮೇಟಿಗೌಡ್ರು “ನಮಗೂ ಹಳ್ಳಕ್ಕೂ ಸಂಬಂಧವಿಲ್ಲ” ಎಂದು ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಹಿಂಬರಹವನ್ನು ಸಲ್ಲಿಸಿದ್ದರು. ಆದರೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶರಣಪ್ಪ ಹಾಗೂ ಪ್ರಾಧಿಕಾರದ ನಗರ ಯೋಜನಾ ಸದಸ್ಯರಾದ ಪ್ರಭಣ್ಣನವರು ಖುದ್ದಾಗಿ ಸ್ಥಳ ಪರಿವೀಕ್ಷಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ! ಆರ್‌ ಐ ಸುರೇಶರ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ “ಸದರಿ ಸರ್ವೆ ನಂಬರ್ 69/3 ರ ಪಕ್ಕದಲ್ಲಿ ನೈಸರ್ಗಿಕ ಹಳ್ಳ ಹರಿಯುತ್ತಿರುವುದು ದಿಶಾಂಕ್ ಆಪ್ ಹಾಗೂ ಮೂಲ ನಕ್ಷೆಗಳ ಪ್ರಕಾರ ಸತ್ಯ. ಆದರೆ ಸ್ಥಳದಲ್ಲಿ ಹಳ್ಳವನ್ನು ಮುಚ್ಚಿ ಕಾಂಕ್ರೀಟ್ ಶೆಡ್ ಹಾಗೂ ಸಿಸಿ ಕ್ಯಾಮೆರಾ ಹಾಕಲಾಗಿದೆ.” ಈ ವರದಿಯ ಬೆನ್ನಲ್ಲೇ ಆಯುಕ್ತ ಶರಣಪ್ಪ ಅವರು ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರಾದ ಪ್ರವೀಣ್‌ ಜಾದವ್‌ ಅವರಿಗೆ ತಮ್ಮ ಇಲಾಖೆಯಿಂದ ಗಡಿ ಗುರುತು ಮಾಡಿದ ನಕ್ಷೆ ಹಾಗೂ ಹಳ್ಳ ಒತ್ತುವರಿಯಾಗಿರುವ ಬಗ್ಗೆ ಮಾಹಿತಿಯನ್ನು ನೀಡಲು ಪತ್ರ ಬರೆದಿದ್ದಾರೆ. ಕೃಷಿಯೇತರ ಜಮೀನು ಪರಿವರ್ತನೆಗೆ ಜಿಲ್ಲಾಧಿಕಾರಿಗಳೇ ತಿರಸ್ಕಾರ ಮಾಡಿದ್ದರೂ, ಇಲ್ಲಿ ಕೆಜೆಪಿ ಅನುಮೋದನೆ ಪಡೆಯಲು ನಕಲಿ ನಕ್ಷೆ ಸೃಷ್ಟಿಸಿರುವ ವಾಸನೆ ಹೊಡೆದ ತಕ್ಷಣ, ಪ್ರಾಧಿಕಾರವು ಕೆಜೆಪಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪಟ್ಟಾದಾರರಿಗೆ ನೋಟಿಸ್ ಜಾರಿ ಮಾಡಿದೆ. ಆಯುಕ್ತರಾದ ಶರಣಪ್ಪರವರಿಗೆ ಎಷ್ಟೇ ಒತ್ತಡ ಬಂದರು ಯಾವುದೇ ಒತ್ತಡಕ್ಕೆ ತಲೆಯನ್ನು ಕೇಡಿಸಿಕೊಳ್ಳುದೇ ಭ್ರಷ್ಟಾಚಾರಕ್ಕೆ ಸಹಕರಿಸುತ್ತಿಲ್ಲ ಎಂಬುದು ಖುಷಿಯ ವಿಚಾರವಾಗಿದೆ.

ಸ್ವಾಮಿ, ಈ ಹಳ್ಳವನ್ನು ಮುಚ್ಚಿರುವುದು ನಾನಲ್ಲ! ಇತ್ತ ಜಮೀನಿನ ಹಾಲಿ ಮಾಲೀಕರಾದ ತಳಕಲ್ ನಿವಾಸಿ ಮಲ್ಲಿಕಾರ್ಜುನ ಗೌಡ ತಂದೆ ಸಂಗನಗೌಡ ಮೇಟಿಗೌಡ್ರು ಪ್ರಾಧಿಕಾರದ ಆಯುಕ್ತರಿಗೆ 28.04.2026 ಬರೆದಿರುವ ಸಮರ್ಥನೆಯ ಪತ್ರದಲ್ಲಿ ಈ ರೀತಿ ಇರುತ್ತದೆ. ತಮಗೆ ಬಂದ ನೋಟಿಸ್‌ಗೆ ಉತ್ತರಿಸಿರುವ ಇವರು, “ಸ್ವಾಮಿ, ಈ ಹಳ್ಳವನ್ನು ಮುಚ್ಚಿರುವುದು ನಾನಲ್ಲ! ಮತ್ತು ನಾವು ಯಾವುದೇ ಅತಿಕ್ರಮಣ ಮಾಡಿರುವುದಿಲ್ಲ. ನಾನು ಈ ಜಮೀನನ್ನು ದಿನಾಂಕ 04-12-2025 ರಂದು ಡಂಬರಹಳ್ಳಿಯ ಶ್ರೀಮತಿ ಅಶ್ವಿನಿ ಗಂಡ ಹರೀಶ್ ರೆಡ್ಡಿ ಎಂಬುವವರಿಂದ ಖರೀದಿ ಮಾಡಿದ್ದೇನೆ. ಅವರು ಸ್ವಾಧೀನದಲ್ಲಿದ್ದಾಗ ಆಗಿರುವ ವ್ಯತ್ಯಾಸಗಳು ನಮಗೆ ತಿಳಿದಿಲ್ಲ” ನಾವು ಖರೀದಿ ಮಾಡುವ ಸಮಯದಲ್ಲಿ ಭೂ ಮಾಪನ ಇಲಾಖಾ ವತಿಯಿಂದ ಅಳತೆ ಮಾಡಿಸಿದ್ದು ಇಲಾಖಾ ನಿಯಮದ ಪ್ರಕಾರ ಹದ್ದುಬಸ್ತು ಗಡಿ ಗುರುತು ಮಾಡಿಕೊಂಡಿರುತ್ತೇವೆ. ಯಾವುದೇ ಅಭಿವೃದ್ಧಿ ಕಾರ್ಯಕೈಗೊಂಡಿದ್ದರು ಸರ್ವೆ ನಂಬರ್ 69/3 ಹದ್ದುಬಸ್ತು ಗಡಿ ಗುರುತುಗಳ ಒಳಗೆ ಕೆಲಸ ಮಾಡಿರುತ್ತೇವೆ ಎಂದು ಕೈತೊಳೆದುಕೊಳ್ಳಲು ನೋಡಿದ್ದಾರೆ. ನೋಡಿ ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಒಂದು ಬಡಾವಣೆ ಅಭಿವೃದ್ಧಿ ಮಾಡಿ ನಿವೇಶನ ಮಾರಾಟಮಾಡಬೇಕು ಎಂದರೇ ಹಲವು ಇಲಾಖೆಗಳ ಪರವಾನಗಿ ಬೇಕು ಮುಖ್ಯವಾಗಿ ಪ್ರಾಧಿಕಾರದ ಅನುಮತಿ ಇಲ್ಲ. ರಸ್ತೆ ಮಾಡಲು ಲೋಕೊಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪರವಾನಗಿ ಬೇಕು ಸಿಡಿ ಮಾಡಿ ಒಳಚರಂಡಿ ಮಾಡಲು ಒಳಚರಂಡಿ ಇಲಾಖೆಯ ಪರವಾನಗಿ ಬೇಕು ಒಟ್ಟಾರೆಯಾಗಿ ಬಡಾವಣೆ ಅಭಿವೃದ್ಧಿ ಪಡಿಸಲು ಹಲವಾರು ಇಲಾಖೆಯ ಪರವಾನಗಿ ಅವ್ಯಶಕತೆ ಇದೆ ಯಾವುದೇ ಪರವಾನಗಿ ಪಡೆಯದೇ 69/3 ಹದ್ದುಬಸ್ತು ಗಡಿ ಗುರುತುಗಳ ಒಳಗೆ ಮುಂಚಿತವಾಗಿ ಕೆಲಸ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು?ಸಾಮಾಜಿಕ ಕಾರ್ಯಕರ್ತ ಕೆ.ಬಿ ಮ್ಯಾಗಳಮನಿ ಅವರ ಕೆಲವು ಪ್ರಶ್ನೆಗಳಿಗೆ ಜಮೀನಿನ ಮಾಲೀಕರ ಸ್ಪಷ್ಟೀಕರಣದ ಅವಶ್ಯಕತೆ ಇದೆ
​ಗೌಡರೇ, ಅಶ್ವಿನಿಯವರು ಮುಚ್ಚಿದ್ದರೋ ಅಥವಾ ನೀವೇ ಮುಚ್ಚಿದ್ದೀರೋ ಅದು ಇಲಾಖೆಯ ತನಿಖೆಯಲ್ಲಿ ಹೊರಬರುತ್ತದೆ. ಆದರೆ ಹಳ್ಳ ಮುಚ್ಚಿದ ಅದೇ ಅಕ್ರಮ ಜಾಗದ ಮೇಲೆ ಬೃಹತ್ ಕಾಂಕ್ರೀಟ್ ಕಾಂಪೌಂಡ್ ಮತ್ತು ಶೆಡ್ ತಲೆ ಎತ್ತಿ ನಿಂತಿರುವುದರ ಹಿಂದೆ ಯಾರ ಹಣದ ಬಲವಿದೆ? ಅದಕ್ಕೆ ಹೈಟೆಕ್ ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಿದ್ದು ಯಾರು? ಖರೀದಿಸುವಾಗ ಕಣ್ಣು ಮುಚ್ಚಿ ಖರೀದಿಸಿದ್ದೀರಾ ಅಥವಾ ಕಾನೂನಿನ ಕಣ್ಣಿಗೆ ಮಣ್ಣೆರಚಲು ಈ ನಾಟಕವಾಡುತ್ತಿದ್ದೀರಾ? ನೀವು ಖರೀದಿಸುವಾಗ ಕಾಂಕ್ರೀಟ್ ಕಾಂಪೌಂಡ್ ಮತ್ತು ಶೆಡ್‌ ಮೊದಲೇ ಈ ಜಾಗದಲ್ಲಿ ಇದ್ದವಾ? ಅಥವಾ ನಮ್ಮ ಹಿಂದೆ ರಾಜಕೀಯವಿದೆ ನಮ್ಮನ್ನು ಯಾರು ಏನು ಮಾಡುತ್ತಾರೆ ಎಂಬ ಬಲವಾದ ನಂಬಿಕೆಯೇ? ತಾವುಗಳು ಈ ಸುದ್ದಿಯನ್ನು ನೋಡಿದ್ದೆ ಆದಲ್ಲಿ ದಯವಿಟ್ಟು ದೂರುದಾರರಿಗೆ ಸ್ಪಷ್ಟೀಕರಣ ನೀಡಿರಿ.


ಕೋಳೂರು ಗ್ರಾಮ ಪಂಚಾಯಿತಿ ಪಿಡಿಒ ಅವರ ‘ಕಾಮಗಾರಿ ನಿಲ್ಲಿಸುವ’ ಕಡಕ್ ಆದೇಶ!
​ಸ್ಥಳೀಯ ಮಟ್ಟದಲ್ಲಿ ಭೂಮಾಫಿಯಾದ ಬೆನ್ನಿಗೆ ನಿಂತಿದ್ದ ಕೆಲವು ಭ್ರಷ್ಟ ಅಧಿಕಾರಿಗಳ ಮೂಗಿನ ನೇರಕ್ಕೆ ಕೋಳೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಯಾದ ಶೇಖರ್‌ ರವರು ಈಗ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಯಾವುದೇ ರೀತಿಯ ಭೂ ಪರಿವರ್ತನೆ ಇಲ್ಲದೆ, ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯದೆ ಸ್ಥಳದಲ್ಲಿ ದರ್ಪದಿಂದ ನಡೆಯುತ್ತಿದ್ದ ಕಾಂಕ್ರೀಟ್ ಗೋಡೆ ಹಾಗೂ ಲೇಔಟ್ ಅಭಿವೃದ್ಧಿ ಕಾಮಗಾರಿಯನ್ನು “ಕೂಡಲೇ ಸ್ಥಗಿತಗೊಳಿಸಬೇಕು” ಎಂದು ಪಿಡಿಒ ಅವರು ಅಧಿಕೃತ ಆದೇಶದ ಪತ್ರ ಹೊರಡಿಸಿದ್ದಾರೆ. ಒಂದು ವೇಳೆ ಆದೇಶ ಮೀರಿ ಕಾಮಗಾರಿ ಮುಂದುವರಿಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ. ಪಂಚಾಯಿತಿಯ ಈ ಪತ್ರ ಭೂಗಳ್ಳರ ಅಕ್ರಮ ಸಾಮ್ರಾಜ್ಯದ ಅಡಿಪಾಯವನ್ನೇ ಕದಲಿಸಿದೆ!

ಹೊರಬಿದ್ದಿತು ತುರ್ತು ನೋಟಿಸ್: ನಾಳೆ ಸ್ಥಳದಲ್ಲಿ ಮಹಾ ಸರ್ವೇ!
​ಹೌದು, ಕಚೇರಿಯ ಎಸಿ ರೂಮಿನಲ್ಲಿ ಫೈಲುಗಳ ಮೇಲೆ ಕುಳಿತುಕೊಂಡು “ಸ್ಥಳ ಪರಿಶೀಲನೆಗೆ ನಮಗೆ ಮುಹೂರ್ತವೇ ಸಿಗುತ್ತಿಲ್ಲ” ಎಂದು ಬೀಗುತ್ತಿದ್ದ ಭೂಮಾಪಕರಾದ ಗವಿಸಿದ್ದಪ್ಪ ಮತ್ತು ದೌಲತ್ ಸಾಬ್ ಜೋಡಿ ಕೊನೆಗೂ ಕಾಗದ ಬಿಟ್ಟು ಹೊರಬಂದಿದೆ. ಇಲಾಖೆಯು ತುರ್ತು ನೋಟಿಸ್ ಜಾರಿ ಮಾಡಿದ್ದು, ದಿನಾಂಕ 18-05-2026 ರಂದು ಸೋಮವಾರ ಖುದ್ದಾಗಿ ಸ್ಥಳಕ್ಕೆ ಬಂದು ಜಮೀನಿನ ಹದ್ದುಬಸ್ತು ಮತ್ತು ಹಳ್ಳದ ಒತ್ತುವರಿಯ ಅಳತೆ ಮಾಡಲು ದಿನಾಂಕ ನಿಗದಿಪಡಿಸಿದೆ. ಮಾಲೀಕ ಮಲ್ಲಿಕಾರ್ಜುನ ಗೌಡ ಮೇಟಿಗೌಡ್ರು, ದೂರುದಾರ ಕೆ.ಬಿ. ಮ್ಯಾಗಳಮನಿ ಹಾಗೂ ಕಂದಾಯ ನಿರೀಕ್ಷಕರಿಗೆ ಮತ್ತು ಗ್ರಾಮ ಆಡಳಿತಾಧಿಕಾರಿಗಳಿಗೆ ಸ್ಥಳದಲ್ಲಿ ಹಾಜರಿರಲು ಅಧಿಕೃತವಾಗಿ ಸೀಲು-ಸಹಿ ಇರುವ ನೋಟಿಸ್ ರವಾನೆಯಾಗಿದೆ.

ಕಂದಾಯ ನಿರೀಕ್ಷಕನ ಉಲ್ಟಾ ಹೊಡೆದ ವರದಿ ಮತ್ತು ಮಾಲೀಕನ ಸಬೂಬು!
​ಈ ಹಗರಣದಲ್ಲಿ ಈಗಾಗಲೇ ಕಂದಾಯ ನಿರೀಕ್ಷಕರು ತಹಶೀಲ್ದಾರರಿಗೆ ಸಲ್ಲಿಸಿರುವ ದಿನಾಂಕ 12-05-2026 ರ ವರದಿಯಲ್ಲಿ, “ಸ್ಥಳದಲ್ಲಿ ನೈಸರ್ಗಿಕ ಹಳ್ಳವನ್ನು ಮಣ್ಣು ಹಾಕಿ ಮುಚ್ಚಿರುವುದು ಮತ್ತು ಅದರ ಮೇಲೆ ಬೃಹತ್ ಕಾಂಕ್ರೀಟ್ ಕಾಂಪೌಂಡ್ ಹಾಗೂ ಶೆಡ್ ಕಟ್ಟಿರುವುದು 100% ಸತ್ಯ” ಎಂದು ಒಪ್ಪಿಕೊಂಡಿದ್ದಾರೆ. ಇತ್ತ ಜಮೀನಿನ ಮಾಲೀಕ ಮಲ್ಲಿಕಾರ್ಜುನ ಗೌಡರು “ನಾನು ಅಶ್ವಿನಿ ಎಂಬುವವರಿಂದ ಜಮೀನು ಖರೀದಿಸಿದ್ದೇನೆ, ನನಗೂ ಹಳ್ಳಕ್ಕೂ ಸಂಬಂಧವಿಲ್ಲ” ಎಂದು ಕಾಗದದ ಮೇಲೆ ಸುಳ್ಳುಗಳ ಗೋಪುರ ಕಟ್ಟುತ್ತಿದ್ದಾರೆ. ಆದರೆ, ಇಲಾಖೆಯ ಹಳೆಯ ನಕ್ಷೆಗಳು ಮತ್ತು ಕೋಳೂರು ಪಿಡಿಒ ನೀಡಿರುವ ತಡೆ ಆದೇಶ ಈಗ ಕುತ್ತಿಗೆಗೆ ಉರುಳಾಗಿದೆ. ಮೂಲ ನಕ್ಷೆಯ ಪ್ರಕಾರ ಹಳ್ಳದ ಅಸ್ತಿತ್ವವನ್ನು ಹಾಗೇ ಉಳಿಸಿ, ಒತ್ತುವರಿಯಾದ ಜಾಗವನ್ನು ಬಿಡಿಸಿ ಕಠಿಣ ಆಡಳಿತದ ಪರವಾಗಿ ವರದಿ ನೀಡುತ್ತೀರಾ? ಅಥವಾ, ಭೂಮಾಫಿಯಾದ ಕಾಸಿನ ಕಾಂಚಾಣಕ್ಕೆ ಮರುಳಾಗಿ, ನೈಸರ್ಗಿಕ ಹಳ್ಳವನ್ನು ನಕ್ಷೆಯಿಂದಲೇ ಮಾಯ ಮಾಡುವಂತಹ ‘ಹೊಸ ಸ್ಕೆಚ್’ ರೆಡಿ ಮಾಡಿಕೊಡುತ್ತೀರಾ? ನಿಮ್ಮ ಪ್ರತಿಯೊಂದು ನಡೆಯ ಮೇಲೂ, ನೀವು ಹಿಡಿಯುವ ಟೇಪಿನ ಪ್ರತಿಯೊಂದು ಇಂಚಿನ ಮೇಲೂ ರಣಭೇಟೆಯ ಕ್ಯಾಮೆರಾ ಕಣ್ಣುಗಳು ಮತ್ತು ಕೊಪ್ಪಳದ ಜನತೆಯ ತೀಕ್ಷ್ಣ ನೋಟ ನೆಟ್ಟಿದೆ ನೆನಪಿರಲಿ!
ನಾಳೆ ಸಂಜೆ ಭೂಮಾಪಕರು ನೀಡುವ ವರದಿ ಇಲಾಖೆಯ ಮಾನ ಉಳಿಸುತ್ತದೆಯೇ ಅಥವಾ ಮಾಫಿಯಾದ ಅಡಿಯಾಳಾಗುತ್ತದೆಯೇ? ರಣಭೇಟೆಯ ಮುಂದಿನ ಸಂಚಿಕೆಯಲ್ಲಿ ಪ್ರತಿಯೊಂದು ಕರಾಳ ಮುಖವಾಡವೂ ಹರಿದು ಬೀಳಲಿದೆ. ಕಾದು ನೋಡೋಣ!

ಮುಂದಿನ ಸಂಚಿಕೆಯಲ್ಲಿ…. ಕೊಪ್ಪಳದ ತಹಶೀಲ್ದಾರ ಬಸವರಾಜ್‌ ತೆನ್ನಳ್ಳಿ ಅವರು ವರದಿ ಅನುಸಾರ ಕ್ರಮ ಕೈಗೊಳ್ಳುತ್ತಾರಾ ? ಅಥವಾ ರಾಜಕೀಯ ಒತ್ತಡಕ್ಕೆ ಮಣಿಯುತ್ತಾರಾ? ಸದರಿ ಜಮೀನು ಸರಕಾರಿ ನೌಕರೊಬ್ಬರ ಬೇನಾಮಿ ಆಸ್ತಿ ಎಂದು ಬಲ್ಲ ಮೂಲಗಳಿಂದ ಮಾಹಿತಿ ಇದೆ ಆಗಿದ್ದರೇ ಆ ಆಧಿಕಾರಿ ಯಾರು? ಮೂಲ ಈ ಜಮೀನು ಸರಕಾರಿ ಜಮೀನಾ ಅಥವಾ ಖಾಸಗಿ ಜಮೀನಾ?ಈ ಎಲ್ಲಾ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚೆ ನಡೆಸೋಣ

error: Content is protected !!
Scroll to Top