ಬಸವರಾಜ್ ತೆನ್ನಳ್ಳಿ ಅವರೇ, ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಿ!
ವಿಶೇಷ ತನಿಖಾ ವರದಿ: ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ:29 (ಸಂಚಿಕೆ-04)
ಕೊಪ್ಪಳ : ಅಧಿಕಾರ, ದುಡ್ಡು ಮತ್ತು ರಾಜಕೀಯ ಮಸಲ್ ಪವರ್ ಇದ್ದರೆ ಈ ದೇಶದಲ್ಲಿ ಏನನ್ನು ಬೇಕಾದರೂ ನುಂಗಿ ನೀರು ಕುಡಿಯಬಹುದು ಅಂದುಕೊಂಡಿದ್ದಾರೆ ಕೆಲವು ಅಕ್ರಮಕೋರರು. ಕಣ್ಣೆದುರೇ ಹರಿಯುವ ನದಿ, ಹಳ್ಳ, ಕೆರೆಗಳನ್ನು ಮಣ್ಣು ಹಾಕಿ ಮುಚ್ಚಿ, ಅಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುವ ಲೇಔಟ್ ದಂಧೆಕೋರರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಅದಕ್ಕೆ ಜ್ವಲಂತ ಸಾಕ್ಷಿ, ನಮ್ಮ ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದಲ್ಲಿ ನಡೆದಿರುವ ಈ ಮಹಾ ಲೂಟಿ!
ದದೇಗಲ್ ಗ್ರಾಮದ ಸ.ನಂ. 69/*/3 ರ ಪಕ್ಕದಲ್ಲಿ ರಾಜಾರೋಷವಾಗಿ ಹರಿಯುತ್ತಿದ್ದ ಸರ್ಕಾರಿ ಹಳ್ಳಕ್ಕೆ ಮಣ್ಣು ಮುಚ್ಚಿ, ಅದನ್ನೇ ನುಂಗಿ ನೀರು ಕುಡಿದು, ಅಕ್ರಮ ಲೇಔಟ್ ಮಾಡಿ, ಸುತ್ತಲೂ ರಾಜ ಗಾಂಭೀರ್ಯದಿಂದ ಕಂಪೌಂಡ್ ಗೋಡೆ ಮತ್ತು ಶೆಡ್‌ಗಳನ್ನು ಕಟ್ಟಿಕೊಂಡಿದ್ದಾರೆ ಈ ಭೂಬಾಕಾಸುರರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳೀಯ ಆಡಳಿತ ನಿದ್ರೆಗಣ್ಣಿನಲ್ಲಿತ್ತೇ? ಖಂಡಿತ ಇಲ್ಲ. ಆದರೆ ಸಾರ್ವಜನಿಕ ವಲಯದಲ್ಲಿ ಎದ್ದ ತೀವ್ರ ಆಕ್ರೋಶ ಮತ್ತು ಸಾಮಾಜಿಕ ಹೋರಾಟಗಾರ ಕೆ.ಬಿ. ಮ್ಯಾಗಳಮನಿ ಅವರ ನಿರಂತರ ಹೋರಾಟದ ಫಲವಾಗಿ ಈಗ ಇಡೀ ಹಗರಣದ ಕರಾಳ ಮುಖ ಬೆತ್ತಲಾಗಿದೆ!
ಕಾಗದ ಪತ್ರಗಳೇ ಕತ್ತು ಸೀಳುತ್ತಿವೆ, ಸುಳ್ಳು ಹೇಳಲು ಸಾಧ್ಯವೇ ಇಲ್ಲ!

ಹಳ್ಳ ಮುಚ್ಚಿ ಲೇಔಟ್ ದಂಧೆ ಕಂದಾಯ ನಿರೀಕ್ಷಕರ ವರದಿಯಲ್ಲಿ ಬೆತ್ತಲಾದ ಸತ್ಯ!
ಕಂದಾಯ ನಿರೀಕ್ಷಕ ಸುರೇಶ್ ಅವರು ಸ್ಥಳಕ್ಕೆ ಹೋಗಿ ಇಂಚು ಇಂಚು ಜಾಲಾಡಿ ಕೊಟ್ಟಿರೋ ವರದಿ ಇದೆಯಲ್ಲ, ಅದು ಇಡೀ ದಂಧೆಯನ್ನ ಬೆತ್ತಲೆ ಮಾಡಿ ನಿಲ್ಲಿಸಿದೆ. ಆ ವರದಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ— ಈ ಮಲ್ಲಿಕಾರ್ಜುನ ಮೇಟಿಗೌಡ್ರು ತಮ್ಮ ಜಮೀನಿನ ಪಕ್ಕದಲ್ಲೇ ಇದ್ದ ಅಧಿಕೃತ “ಸರ್ಕಾರಿ ಹಳ್ಳ”ಕ್ಕೆ ರಾತ್ರೋರಾತ್ರಿ ಮಣ್ಣು ಹಾಕಿ ಮುಚ್ಚಿಬಿಟ್ಟಿದ್ದಾರೆ. ಅಷ್ಟಕ್ಕೇ ಮುಗಿಯಲಿಲ್ಲ ಇವರ ದರ್ಪ, ಆ ಸರ್ಕಾರಿ ಹಳ್ಳದ ಜಾಗವನ್ನೇ ಒತ್ತುವರಿ ಮಾಡಿಕೊಂಡು ಸುತ್ತಲೂ ಗಟ್ಟಿಮುಟ್ಟಾದ ಕಂಪೌಂಡ್ ಗೋಡೆ ಕಟ್ಟಿದ್ದಾರೆ, ಒಳಗೆ ಶೆಡ್‌ಗಳನ್ನು ಎಬ್ಬಿಸಿದ್ದಾರೆ ಎಂದು ಪರಿಶೀಲನೆ ವೇಲೆ ತಿಳಿದುಬಂದಿರುತ್ತದೆ ಎಂದು ವರದಿಯನ್ನು ನೀಡಿರುತ್ತಾರೆ.
ಅಧಿಕಾರಿಗಳು ವಿಚಾರಣೆ ನಡೆಸಿದಾಗ ಈ ಇವರು ಕೊಟ್ಟ ಉಡಾಫೆಯ ಉತ್ತರ ಏನ ಗೊತ್ತಾ? “ನಾನು ಈ ಜಮೀನನ್ನು ಖರೀದಿ ಮಾಡುವುದಕ್ಕಿಂತ ಮುಂಚಿತವಾಗಿಯೇ ಹಳ್ಳವನ್ನು ಮುಚ್ಚಿ ಕಂಪೌಂಡ್ ಮಾಡಲಾಗಿತ್ತು” ಅಂತ ಕೈ ತೊಳೆದುಕೊಳ್ಳೋಕೆ ನೋಡಿದ್ದಾರೆ. ಆದರೆ ಕಂದಾಯ ನಿರೀಕ್ಷಕರ ತನಿಖೆಯ ಮುಂದೆ ಈ ಡ್ರಾಮಾ ನಡೆಯಲಿಲ್ಲ. ಪರಿಶೀಲನೆಯ ವೇಳೆ ಈತನೇ ಹಳ್ಳ ಮುಚ್ಚಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೇ ಸಾಬೀತಾಗಿದೆ ಎಂದು ಸುರೇಶ್ ಅವರು ವರದಿಯಲ್ಲಿ ಕಟು ಸತ್ಯವನ್ನು ಬರೆದಿದ್ದಾರೆ.

ಕಂದಾಯ ನಿರೀಕ್ಷಕ ಸುರೇಶ್ ಮತ್ತು ತಾಲೂಕು ಭೂಮಾಪಕರು ಜಂಟಿಯಾಗಿ ಸ್ಥಳ ಪರಿಶೀಲನೆ. ಕಂದಾಯ ನಿರೀಕ್ಷಕ ಸುರೇಶ್ ಮತ್ತು ತಾಲೂಕು ಭೂಮಾಪಕರು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಕೊಟ್ಟಿರುವ ವರದಿಯಲ್ಲೇ ಹಳ್ಳ ಮುಚ್ಚಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಅದರ ಮುಂದುವರಿದ ಭಾಗವಾಗಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಜಂಟಿ ಅಳತೆ ಕಾರ್ಯ ಮುಗಿಸಿ ಮೇ ತಿಂಗಳ 25ಕ್ಕೆ ತಹಶೀಲ್ದಾರರ ಮೇಜಿನ ಮೇಲೆ ಇಟ್ಟಿರುವ ವರದಿ ಇಡೀ ಅಕ್ರಮದ ಜಾತಕವನ್ನೇ ಬಿಚ್ಚಿಟ್ಟಿದೆ.
ಆ ವರದಿಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ “ದದೇಗಲ್ ಗ್ರಾಮದ ಸ.ನಂ. 69 ರ ಹಿಸ್ಸಾ 3 ರ ಪಶ್ಚಿಮ ಭಾಗದ ಕಡೆಗೆ ಇರುವ ಹಳ್ಳದ ಪ್ರದೇಶದಲ್ಲಿ ಬರೋಬ್ಬರಿ 0-15 ಹದಿನೈದು ಗುಂಟೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಂಪೌಂಡ್ ನಿರ್ಮಿಸಲಾಗಿದೆ.” ಹದಿನೈದು ಗುಂಟೆ ಸರ್ಕಾರಿ ಹಳ್ಳ ಅಂದರೆ ಸಣ್ಣ ಆಟವಲ್ಲ! ನೈಸರ್ಗಿಕ ನೀರಿನ ಹರಿವನ್ನೇ ತಡೆದು, ಪ್ರಕೃತಿಯ ಕರಳು ಸೀಳಲು ನಿಂತಿರುವ ಈ ಅಕ್ರಮಕೋರರ ಕುತ್ತಿಗೆಗೆ ತಗುಲಿಸಲು ಈಗ ಕಾನೂನಿನ ಗೂಟ ಸಿದ್ಧವಾಗಿದೆ. ಕಚೇರಿಯಿಂದಲೇ “ಈ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಿ” ಎಂದು ಆದೇಶದ ರೂಪದ ಪತ್ರ ರವಾನೆಯಾಗಿದೆ.

ಇಂಚು ಇಂಚು ಸಾಬೀತಾಗಿದೆ ಅಕ್ರಮ ದೂರುದಾರ ಕೆ.ಬಿ. ಮ್ಯಾಗಳಮನಿ ರಣಗರ್ಜನೆ! ಈ ಮಹಾ ಹಗರಣವನ್ನು ಹೊರಗೆಳೆದ ಸಾಮಾಜಿಕ ಹೋರಾಟಗಾರ ಶ್ರೀ ಕೆ.ಬಿ. ಮ್ಯಾಗಳಮನಿ ಅವರು ‘ರಣಬೇಟೆ ವೆಬ್ ನ್ಯೂಸ್’ ಜೊತೆ ಮಾತನಾಡುತ್ತಾ ನೇರವಾಗಿಯೇ ಸವಾಲು ಹಾಕಿದ್ದಾರೆ.
”ಇಲಾಖೆಯ ಇಬ್ಬರು ಅಧಿಕಾರಿಗಳ ವರದಿಗಳು ಹಳ್ಳ ಮುಚ್ಚಿರುವುದನ್ನು ನಿಖರವಾಗಿ ದೃಢಪಡಿಸಿವೆ. ತಾಲೂಕು ದಂಡಾಧಿಕಾರಿಗಳಾದ ಬಸವರಾಜ್ ತೆನ್ನಳ್ಳಿ ಅವರು ಯಾವುದೇ ರಾಜಕೀಯ ಒತ್ತಡ, ಮಂತ್ರಿ-ಶಾಸಕರ ಫೋನ್ ಕಾಲ್‌ಗಳಿಗೆ ಬಲಿಯಾಗಬಾರದು. ತಕ್ಷಣವೇ ಅತಿ ಜರೂರಾಗಿ ಶಿಸ್ತು ಕ್ರಮ ಕೈಗೊಳ್ಳಬೇಕು. ನೈಸರ್ಗಿಕವಾಗಿ ಹರಿಯುತ್ತಿದ್ದ ಆ ಹಳ್ಳವನ್ನು ಮೊದಲಿನ ಸ್ಥಿತಿಗೆ ತರಬೇಕು ಮತ್ತು ಹಳ್ಳ ಮುಚ್ಚಿದವರ ಮೇಲೆ ಕಾನೂನು ವ್ಯಾಪ್ತಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಶಿಫಾರಸ್ಸು ಮಾಡಬೇಕು. ಒಂದು ವೇಳೆ ತಹಶೀಲ್ದಾರರು ವಿನಾಕಾರಣ ಕಾಲಹರಣ ಮಾಡಿ, ಒತ್ತುವರಿದಾರರನ್ನು ರಕ್ಷಿಸುವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿದರೆ, ನಾವು ಸುಮ್ಮನೆ ಕೂರುವುದಿಲ್ಲ. ಈ ಹಗರಣಕ್ಕೆ ಸಂಬಂಧಪಟ್ಟ ತಹಶೀಲ್ದಾರ್ ಸೇರಿದಂತೆ ಇಲಾಖೆಯ ಎಲ್ಲಾ ಅಧಿಕಾರಿಗಳ ವಿರುದ್ಧ ‘ವಿಶೇಷ ಭೂ ನ್ಯಾಯಾಲಯ’ದಲ್ಲಿ ನೇರವಾಗಿ ಪ್ರಕರಣ ದಾಖಲು ಮಾಡಲಾಗುವುದು!”

ಕೊಪ್ಪಳ ತಹಶೀಲ್ದಾರ್ ಬಸವರಾಜ್ ತೆನ್ನಳ್ಳಿ ಅವರು ‘ರಣಬೇಟೆ’ಗೆ ನೀಡಿದ ಪ್ರತಿಕ್ರಿಯೆ ಏನು?
ಈ ಇಡೀ ಹಗರಣ ಮತ್ತು ಹೋರಾಟಗಾರರ ಆಕ್ರೋಶದ ಕುರಿತು ‘ರಣಬೇಟೆ ವೆಬ್ ನ್ಯೂಸ್’ ಕೊಪ್ಪಳ ತಹಶೀಲ್ದಾರ್ ಆದ ಬಸವರಾಜ್ ತೆನ್ನಾಳ್ಳಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸಿದಾಗ ಅವರು ಅತ್ಯಂತ ಜವಾಬ್ದಾರಿಯುತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
”ಈಗಾಗಲೇ ಈ ಜಾಗದ ಕುರಿತು ಜಂಟಿ ಸರ್ವೆ ಕಾರ್ಯವನ್ನು ಮಾಡಿಸಲಾಗಿದೆ. ಸರ್ವೆ ವರದಿಯನ್ನು ಅಧಿಕೃತವಾಗಿ ಪಡೆದುಕೊಳ್ಳಲಾಗಿದ್ದು, ಇದರ ಅನ್ವಯ ಮುಂದಿನ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳಲು ಕಂದಾಯ ನಿರೀಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.”
ತಹಶೀಲ್ದಾರ್ ಸಾಹೇಬರೇ, ನೀವು ಸರ್ವೆ ಮಾಡಿಸಿ, ಆರ್.ಐಗೆ ಸೂಚನೆ ನೀಡಿರುವ ನಡೆ ಸ್ವಾಗತಾರ್ಹ. ಆದರೆ ನೆನಪಿಡಿ, ಈ ಲೇಔಟ್ ದಂಧೆಯ ಹಿಂದೆ ಕೋಟಿ ಕೋಟಿ ಹಣದ ಆಟವಿದೆ. ಪ್ರಭಾವಿ ರಾಜಕಾರಣಿಗಳ ನೆರಳಿದೆ. ಕಂದಾಯ ನಿರೀಕ್ಷಕ ಸುರೇಶ್ ಅವರ ವರದಿಯಲ್ಲೇ ಮೇಲ್ನೋಟಕ್ಕೆ ಅಕ್ರಮ ಸಾಬೀತಾಗಿದೆ ಎಂದು ನೀವು ಮೇ 18ಕ್ಕೇ ‘ಅತೀ ಜರೂರು ಮೆಮೋ’ ಕೊಟ್ಟಿದ್ದೀರಿ. ಆದರೂ ಹಳ್ಳದ ಮೇಲಿರುವ ಆ ಅಕ್ರಮ ಕಂಪೌಂಡ್ ನೆಲಸಮ ಮಾಡಲು ಜೆಸಿಬಿಗಳು ಇನ್ನು ಯಾಕೆ ದದೇಗಲ್ ಕಡೆ ಮುಖ ಮಾಡಿಲ್ಲ ಅನ್ನೋದು ಸಾರ್ವಜನಿಕರ ಪ್ರಶ್ನೆ.
ನಿಮ್ಮದೇ ಇಲಾಖೆಯ ಅಧಿಕಾರಿಗಳು ಕೊಟ್ಟಿರುವ ವರದಿಯೇ ನಿಮಗೆ ಪರಮೋಚ್ಚ ಅಸ್ತ್ರ. ಯಾವುದೇ ರಾಜಕೀಯ ಮುಲಾಜಿಗೆ ಒಳಗಾಗದೆ ಆ ಹದಿನೈದು ಗುಂಟೆ ಸರ್ಕಾರಿ ಹಳ್ಳವನ್ನು ಮುಕ್ತಗೊಳಿಸಿ, ಪ್ರಕೃತಿಯ ಕರಳು ಸೀಳಿದವರನ್ನು ಜೈಲಿಗೆ ಕಳುಹಿಸುವ ತಾಕತ್ತನ್ನು ನೀವು ತೋರಿಸಬೇಕಿದೆ. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಸ್ಪೆಷಲ್ ಕೋರ್ಟ್ ಮೆಟ್ಟಿಲೇರಲು ಹೋರಾಟಗಾರರು ಸಿದ್ಧರಾಗಿದ್ದಾರೆ.
ರಾಜಕೀಯ ಒತ್ತಡಕ್ಕೆ ಮಣಿಯದೇ ಅಕ್ರಮಕೋರರ ಹೆಡೆಮುರಿ ಕಟ್ಟಿ ಕೊಪ್ಪಳದ ಜನರ ಪಾಲಿನ ಸಿಂಹಸ್ವಪ್ನವಾಗುತ್ತೀರೋ? ನಿರ್ಧಾರ ನಿಮಗೇ ಬಿಟ್ಟಿದ್ದು.
ಸಂಚಿಕೆ ಮುಂದುವರೆಯುತ್ತದೆ….

