ಬಿದ್ದಿದ್ದು ಕಾಂಪೌಂಡ್, ಉಳಿದಿದ್ದು ಹಳ್ಳದ ಸಮಾಧಿ!

ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ.

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜೂ:08 (ಸಂಚಿಕೆ-05)

ಕೊಪ್ಪಳ: ಇದು ಅಧಿಕಾರದ ಮದದಲ್ಲಿ ನಿಸರ್ಗದ ಉಸಿರು ಹಿಸುಕಿದ ಪಾಪಿಗಳ ಕಥೆ. ದದೇಗಲ್ ಗ್ರಾಮದ ಸರ್ವೆ ನಂಬರ್ 69/3 ಮತ್ತು ಅದರ ಪಕ್ಕದಲ್ಲಿ ಸರ್ಕಾರಿ ಹಳ್ಳವೊಂದನ್ನು ಮಣ್ಣು ಮಾಡಿ, ಅದರ ಮೇಲೆ ಅಕ್ರಮದ ಅರಮನೆ ಕಟ್ಟಲು ಹೊರಟ ಭೂಗಜಗಳ ಆಟಕ್ಕೆ ರಣಬೇಟೆ ವೆಬ್ ನ್ಯೂಸ್ ಇಟ್ಟ ಇತಿಶ್ರೀ ಇದು. ನಮ್ಮ ನಿರಂತರ ವರದಿಗಳ ಮಹಾ ಸ್ಪೋಟಕ್ಕೆ ಕೊನೆಗೂ ಎಚ್ಚೆತ್ತುಕೊಂಡ ತಹಶೀಲ್ದಾರರು ದಿನಾಂಕ 29-05-2026 ರಂದು ಮಾಲೀಕರಿಗೆ ನೀಡಿರುವ ಆ ಸ್ಫೋಟಕ ನೋಟಿಸ್ ಈಗ ನಮ್ಮ ಮೇಜಿನ ಮೇಲಿದೆ!


ಬಾಹಿರ ಒತ್ತುವರಿ ಮತ್ತು ತಹಶೀಲ್ದಾರರ ಚಾಟಿ!
​ಹೌದು, ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ತಹಶೀಲ್ದಾರರು ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಸದರಿ ಸರ್ವೆ ನಂಬರ್ 69/3 ರ ಜಮೀನಿನ ಒಟ್ಟು ವಿಸ್ತೀರ್ಣ 5-22 ಎಕರೆ. ಇದರಲ್ಲಿ ನೈಸರ್ಗಿಕವಾಗಿ ಹರಿಯುವ ಹಳ್ಳದ ಪ್ರದೇಶವೇ ಬರೋಬ್ಬರಿ 1-15 ಎಕರೆ! ಅಂದರೆ, ಮಾಲೀಕರು ಅಷ್ಟು ಸರ್ಕಾರಿ ಹಳ್ಳವನ್ನು ನುಂಗಿ ನೀರು ಕುಡಿದಿರುವುದು ದಾಖಲೆ ಸಮೇತ ಸಾಬೀತಾಗಿದೆ.
​ದಿನಾಂಕ 18-05-2026 ರಂದು ಭೂಮಾಪಕರು ದೌಲತ್ ಸಾಬ್ ಮತ್ತು ಗವಿಸಿದ್ದಪ್ಪ ಜೋಡಿ ಜಂಟಿ ಅಳತೆ ನಡೆಸಿ ನೀಡಿದ ವರದಿಯ ಬೆನ್ನಲ್ಲೇ ತಹಶೀಲ್ದಾರರು ಮಾಲೀಕ ಮಲ್ಲಿಕಾರ್ಜುನ ಗೌಡ ಮೇಟಿಗೌಡ್ರ ಅವರಿಗೆ ಮರಣಶಾಸನ ಬರೆದಿದ್ದಾರೆ. “ದಿನಾಂಕ 06-06-2026 ರೊಳಗಾಗಿ 1-15 ಎಕರೆ ಸರ್ಕಾರಿ ಹಳ್ಳದ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸಿ, ಮೂಲ ಹರಿವನ್ನು ಯಥಾಸ್ಥಿತಿಗೆ ತರಬೇಕು” ಎಂದು ಖಡಕ್ ಆಗಿ ನೋಟಿಸ್ ನೀಡಿದ್ದಾರೆ. ಒಂದು ವೇಳೆ ತಪ್ಪಿದರೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 192 ರ ಅನ್ವಯ ಅಕ್ರಮ ಒತ್ತುವರಿದಾರರಿಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಲಾಗುವುದು ಎಂದು ಲಿಖಿತವಾಗಿ ಎಚ್ಚರಿಸಿದ್ದಾರೆ.


ರಣಬೇಟೆಯ ಬಿಲಿಯನ್ ಡಾಲರ್ ಪ್ರಶ್ನೆ ಕಾಂಪೌಂಡ್ ಬಿದ್ದಿದೆ, ಹಳ್ಳ ಎಲ್ಲಿದೆ?
​ತಹಶೀಲ್ದಾರರ ಆದೇಶಕ್ಕೆ ಮಣಿದು ಮಾಲೀಕರು ದದೇಗಲ್ ಗ್ರಾಮದ ಅಂಗಳಕ್ಕೆ ಇಳಿದು ಅಕ್ರಮ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಿರುವುದು ಸತ್ಯ. ನಾವು ಕಳುಹಿಸಿರುವ ಛಾಯಾಚಿತ್ರಗಳಲ್ಲಿ ಕಾಂಪೌಂಡ್ ನೆಲಸಮವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ, ನಮ್ಮ ಬೇಟೆ ಇಲ್ಲಿಗೆ ನಿಂತಿಲ್ಲ! ದದೇಗಲ್ ಅಂಗಳಕ್ಕೆ ಹೋಗಿ ನೋಡಿದಾಗ ಅಸಲಿ ಕರಾಳ ಮುಖವಾಡ ಕಳಚಿದೆ.
​ಬಾಟಮ್ ಲೈನ್ ಏನೆಂದರೆ, ಕಾಂಪೌಂಡ್ ತೆರವುಗೊಳಿಸಲಾಗಿದೆ ಹೊರತು ಮೂಲ ನೈಸರ್ಗಿಕ ಹಳ್ಳವನ್ನು ಮಣ್ಣಿನಿಂದ ಬಿಡಿಸಿ ತೆರವುಗೊಳಿಸಿರುವುದಿಲ್ಲ! ಇಡೀ 1-15 ಎಕರೆ ಹಳ್ಳಕ್ಕೆ ಸಂಪೂರ್ಣವಾಗಿ ಮಣ್ಣು ಹಾಕಿ ಮುಚ್ಚಿ, ನೈಸರ್ಗಿಕ ಹರಿವನ್ನು ಬಂದ್ ಮಾಡಲಾಗಿದೆ. ಆ ಮುಚ್ಚಿ ಹೋದ ಹಳ್ಳದ ಮೇಲೆ ಮಣ್ಣಿನ ರಾಶಿ, ಗಿಡಗಂಟಿಗಳು ಹಾಗೇ ಇವೆ. ತಹಶೀಲ್ದಾರರ ಆದೇಶ ಯಥಾವತ್ತಾಗಿ ಪಾಲನೆಯಾಗಿಲ್ಲ!


​ತಹಶೀಲ್ದಾರರ ಮೂಗಿಗೆ ರಣಬೇಟೆಯ ನೇರ ಚಾಟಿ!
​ಮಾನ್ಯ ತಹಶೀಲ್ದಾರರೇ, ಕಾಂಪೌಂಡ್ ಉರುಳಿಸಿದ ಮಾತ್ರಕ್ಕೆ ಹಳ್ಳಕ್ಕೆ ಜೀವ ಸಿಕ್ಕಿದೆ ಎಂದು ಭಾವಿಸಬೇಡಿ. ಅದು ಮಹಾ ಮಸುಕೆ ಮತ್ತು ನಿಮಗೂ ಆ ಭೂಮಾಫಿಯಾಕ್ಕೂ ಆಗಿರುವ ಒಳಒಪ್ಪಂದವೇ ಎಂಬ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗಿದೆ. ಕಾಂಪೌಂಡ್ ಬಿದ್ದ ನಂತರ ಹಳ್ಳದ ಹರಿವಿನ ಜಾಗವನ್ನು ಯಥಾ ಪ್ರಕಾರ ಮಣ್ಣು ತೆಗೆದು, ಮೂಲ ಸ್ಥಿತಿಗೆ ತರುವವರೆಗೆ ನಿಮ್ಮ ಆದೇಶಕ್ಕೆ ಯಾವುದೇ ಬೆಲೆಯಿಲ್ಲ. ಯಾವುದೇ ಕಾರಣಕ್ಕೂ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸದೆ, ಹಳ್ಳದ ಯಥಾಸ್ಥಿತಿಗೆ ಬರುವವರೆಗೂ ಕಠಿಣ ಕ್ರಮ ಕೈಗೊಳ್ಳಿ!


ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಇನ್ನಿತರ ಇಲಾಖೆಗಳಿಗೆ ಭೂಗಳ್ಳರಿಗೆ ಮಣಿಹಾಕಬೇಡಿ.
​ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶರಣಪ್ಪ ಅವರೇ ಮತ್ತು ಯೋಜನಾ ಸದಸ್ಯರಾದ ಪ್ರಭಣ್ಣ ಅವರೇ, ದಾಖಲೆಗಳೇ ಅರಚಾಡಿ ಹೇಳುತ್ತಿವೆ ಇಲ್ಲಿ 1-15 ಎಕರೆ ಸರ್ಕಾರಿ ಹಳ್ಳ ಸಮಾಧಿಯಾಗಿದೆ ಎಂದು. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಈ ಸರ್ಕಾರಿ ಹಳ್ಳವು ಯಥಾಸ್ಥಿತಿಗೆ ಬರುವವರೆಗೂ, ಮೂಲ ಹರಿವು ಸರಿಯಾಗುವವರೆಗೂ ಸದರಿ ಲೇಔಟ್‌ಗೆ ಯಾವುದೇ ರೀತಿಯ ಕೆಜೆಪಿ ಅಥವಾ ಕಟ್ಟಡ ಪರವಾನಗಿಯನ್ನು ನೀಡಬಾರದು. ಒಂದು ವೇಳೆ ನೀಡಿದರೆ ಅದು ಈ ಅಧಿಕಾರಿಗಳೇ ನೇರ ಹೊಣೆ ಹಾಗೂ ಆದೇಶವು ಉಲ್ಲಂಘನೆಯಾಗುತ್ತದೆ ನೆನಪಿರಲಿ.


ಮುಂದಿನ ಪರಿಣಾಮಗಳು ಮಾಲೀಕರಿಗೆ ಮರಣಶಾಸನ!
​ಮಾಲೀಕರೇ, ಈಗಲಾದರೂ ನೋಟಿಸ್ ಓದಿ. ಕಾಂಪೌಂಡ್ ಮಾತ್ರ ಕೆಡವಿ ಸಮಾಧಾನ ಪಟ್ಟರೆ ಅದು ನಿಮ್ಮ ಮೂರ್ಖತನ. ನೀವು ಮುಚ್ಚಿದ ಹಳ್ಳದ 1-15 ಎಕರೆ ಜಾಗವನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ಸರಕಾರಕ್ಕೆ ಒಪ್ಪಿಸದಿದ್ದರೆ, ಕಂದಾಯ ಇಲಾಖೆಯು ನಿಮ್ಮ ಇಡೀ ಜಮೀನನ್ನು ತನಗೆ ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗಟ್ಟುವ ಅಧಿಕಾರ ಹೊಂದಿದೆ. ಕಾನೂನಿನ ಬಿಸಿ ನಿಮಗೆ ತಾಕುವ ಮುನ್ನ, ಹಳ್ಳದ ಮೂಲ ಹರಿವನ್ನು ಯಥಾ ಪ್ರಕಾರ ತೆಗೆದು ಸಮಾಜಕ್ಕೆ ಒಪ್ಪಿಸಿ.
ದದೇಗಲ್ ಹಳ್ಳದ ಮೂಲ ಉಸಿರು ಉಳಿಯುತ್ತದೆಯೇ? ಅಥವಾ ಮಾಫಿಯಾದ ಮದಕ್ಕೆ ಇಲಾಖೆಯೇ ಬಲಿಯಾಗುತ್ತದೆಯೇ? ರಣಬೇಟೆಯ ಬೇಟೆ ಹೀಗೆಯೇ ಮುಂದುವರಿಯುತ್ತದೆ, ಕಾದು ನೋಡಿ!

ಸಂಚಿಕೆ ಮುಂದುವರೆಯುತ್ತದೆ

error: Content is protected !!
Scroll to Top