ಸತ್ಯದ ಪರವಾಗಿ ನಿಂತು ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ ಡಿಡಿಪಿಐ ಮತ್ತು ಬಿಇಓ ಕಾರ್ಯವೈಖರಿಗೆ ಅಭಿನಂದನೆ..!
ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:21 (ಸಂಚಿಕೆ-3)
ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಉಪ ಪ್ರಾಚಾರ್ಯರು ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ‘ಕ್ಯೂಆರ್ ಕೋಡ್’ ಮತ್ತು ಖಾಸಗಿ ಜೆರಾಕ್ಸ್ ಅಂಗಡಿಯ ಮುಖಾಂತರ ಬಡ ಪಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಗಂಭೀರ ಹಗರಣಕ್ಕೆ ಸಂಬಂಧಿಸಿದಂತೆ ‘ರಣಬೇಟೆ ವೆಬ್ ನ್ಯೂಸ್’ ನಡೆಸಿದ ಸರಣಿ ತನಿಖಾ ವರದಿಗಳಿಗೆ ಅಂತಿಮವಾಗಿ ಇಲಾಖೆಯ ಅಧಿಕೃತ ಮೊಹರು ಬಿದ್ದಿದೆ.
ಸಂಪಾದಕರ ದೂರು ಹಾಗೂ ‘ರಣಬೇಟೆ’ ಪ್ರಕಟಿಸಿದ ಸರಣಿ ಸುದ್ದಿಗಳನ್ನೇ ಪ್ರಮುಖ ಉಲ್ಲೇಖವಾಗಿಟ್ಟುಕೊಂಡು, ಕೊಪ್ಪಳ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಈಗ ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಅಪರ ಆಯುಕ್ತರಿಗೆ ತನಿಖಾ ವರದಿಯನ್ನು ರವಾನಿಸಿದ್ದಾರೆ.

ಉಪ ಪ್ರಾಚಾರ್ಯರ ‘ಸಮಜಾಯಿಷಿ’ಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಇಲಾಖೆ!
ಉಪನಿರ್ದೇಶಕರ ಕಚೇರಿಯಿಂದ ನೀಡಲಾಗಿದ್ದ ಕಾರಣ ಕೇಳುವ ನೋಟಿಸ್‌ಗೆ ಉಪ ಪ್ರಾಚಾರ್ಯ ಶ್ರೀ ವೀರಯ್ಯ ಸುಡಿಮಠ ಅವರು ಜುಲೈ 10, 2026 ರಂದು ಸುದೀರ್ಘ ಸಮಜಾಯಿಷಿ ವಿವರಣೆ ನೀಡಿದ್ದರು. “ಶಾಲೆಯಲ್ಲಿ ಕ್ಲರ್ಕ್ ಹುದ್ದೆ ಖಾಲಿ ಇದ್ದಿದ್ದರಿಂದ ಮತ್ತು ಪ್ರವೇಶಾತಿ ಪ್ರಕ್ರಿಯೆಯಲ್ಲಿ ಶಿಕ್ಷಕರ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಎಸ್‌ಡಿಎಂಸಿ ಹಾಗೂ ಪಾಲಕರ ನಿರ್ಧಾರದಂತೆ ಕ್ಯೂಆರ್ ಕೋಡ್ ಅಳವಡಿಸಲಾಗಿತ್ತು” ಎಂದು ಅವರು ತಮ್ಮ ಸೃಷ್ಟಿತ ಕ್ರಮವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಈ ಹಾರಿಕೆ ಉತ್ತರವನ್ನು ಇಲಾಖೆ ಸಂಪೂರ್ಣವಾಗಿ ತಳ್ಳಿಹಾಕಿದೆ.

ಬಿಇಓ ವರದಿಯಲ್ಲೂ ‘ಉಲ್ಲಂಘನೆ’ ಸ್ಪಷ್ಟ ಶಿಸ್ತುಕ್ರಮಕ್ಕೆ ಉಪ ನಿರ್ದೇಶಕರಿಂದ ವರದಿ ಶಿಫಾರಸ್ಸು.
ಕೊಪ್ಪಳದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಡೆಸಿದ ತನಿಖಾ ವರದಿಯನ್ನು ಆಧಾರವಾಗಿಟ್ಟುಕೊಂಡು ಡಿಡಿಪಿಐ ಅವರು ತಮ್ಮ ಅಧಿಕೃತ ಪತ್ರದಲ್ಲಿ ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ:
”ಸದರಿ ಶಾಲೆಯ ಉಪಪ್ರಾಂಶುಪಾಲರು ಇಲಾಖೆಯ ನಿರ್ದೇಶನಗಳನ್ನು ಉಲ್ಲಂಘಿಸಿ, ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ, ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿ ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.”
ಈ ಹಿನ್ನೆಲೆಯಲ್ಲಿ, ಇಲಾಖೆಯ ಘನತೆಗೆ ಧಕ್ಕೆ ತಂದು, ಪಾಲಕರಿಗೆ ಅನಗತ್ಯ ತೊಂದರೆ ನೀಡಿದ ಉಪ ಪ್ರಾಚಾರ್ಯರಾದ ಶ್ರೀ ವೀರಯ್ಯ ಸುಡಿಮಠ ಇವರ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಬೇಕೆಂದು ಮಾನ್ಯ ಉಪನಿರ್ದೇಶಕರು (ಆಡಳಿತ) ಕಲಬುರಗಿ ಅಪರ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.

ಶೇಖರಪ್ಪ ಹೊರಪೇಟೆ ಅವರ ಕಾರ್ಯಕ್ಕೆ ಅಭಿನಂದನೆ ಭವಿಷ್ಯದ ಶಿಕ್ಷಕರಿಗೆ ಎಚ್ಚರಿಕೆ!
ಆರಂಭದಲ್ಲಿ ಮಂದಗತಿಯಲ್ಲಿದ್ದರೂ, ಪ್ರಕರಣದ ಗಂಭೀರತೆಯನ್ನು ಅರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಉನ್ನತ ಅಧಿಕಾರಿಗಳಿಗೆ ವರದಿ ರವಾನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶೇಖರಪ್ಪ ಹೊರಪೇಟೆ ಅವರ ನಿರ್ಣಾಯಕ ನಡೆಗೆ ಪಾಲಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಒಬ್ಬ ಅಧಿಕಾರಿಯ ಮೇಲಿನ ಕ್ರಮವಲ್ಲ ಸರ್ಕಾರಿ ಶಾಲೆಗಳನ್ನು ತಮ್ಮ ಸ್ವಂತ ಆಸ್ತಿಯಂತೆ ಭಾವಿಸಿ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಏಕಚಕ್ರಾಧಿಪತ್ಯ ನಡೆಸಲು ಹೊರಟಿಸುವ ಪ್ರತಿಯೊಬ್ಬ ಶಿಕ್ಷಕ ಹಾಗೂ ಅಧಿಕಾರಿಗೆ ಸಿಕ್ಕ ಕಡಕ್ ಎಚ್ಚರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಯಾವುದೇ ಶಾಲೆಯಲ್ಲಿ ಇಂತಹ ನಿಯಮಬಾಹಿರ ಆಟಗಳು ನಡೆಯದಂತೆ ಈ ಪ್ರಕರಣ ಮಾದರಿಯಾಗಲಿದೆ.
ಪಾಲಕರ ಹಿತರಕ್ಷಣೆಗೆ ಮತ್ತು ಸತ್ಯದ ಪರವಾಗಿ ‘ರಣಬೇಟೆ’ ನಡೆಸಿದ ಈ ಸುದೀರ್ಘ ಸಮರಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.
ಸಂಚಿಕೆ ಮುಂದುವರೆಯುತ್ತದೆ.

