ಕಡತಗಳ ಕಣ್ಣಾಮುಚ್ಚಾಲೆ!

ದದೇಗಲ್ ಹಳ್ಳ ನುಂಗಿದವರಿಗೆ ಎಡಿಸಿ ಮರುತನಿಖೆಯ ಶಾಕ್!

ರಣಬೇಟೆ ಎಕ್ಸ್‌ಕ್ಲೂಸಿವ್ ವಿಶೇಷ ಸರಣಿ ವರದಿ ಸೆ:9 (ಸಂಚಿಕೆ-07)
ಕೊಪ್ಪಳ: ಪ್ರಕೃತಿಗೆ ತನ್ನದೇ ಆದ ಒಂದು ನೀತಿಯಿದೆ. ಕಾಲಕಾಲಕ್ಕೆ ಹರಿಯುವ ತೊರೆ, ನದಿಗಳು ಕೇವಲ ನೀರಿನ ಪಾತ್ರಗಳಲ್ಲ; ಅವು ಭೂಮಿಯ ಉಸಿರಾಟದ ನಾಡಿಗಳು. ಆದರೆ, ಮನುಷ್ಯನ ದುರಾಸೆ ಮತ್ತು ಲಾಭದ ತಹಾಕೆಗೆ ಬಿದ್ದಾಗ ಆ ನೈಸರ್ಗಿಕ ನಾಡಿಗಳನ್ನೇ ಹೂತುಹಾಕುವ ಸಾಹಸಕ್ಕೆ ಕೈಹಾಕುತ್ತಾನೆ. ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಸರ್ವೆ ನಂಬರ್ 69/*/3 ರ ವಿಶಾಲವಾದ ಜಮೀನಿನಲ್ಲಿ ಹರಿಯುತ್ತಿದ್ದ ನೈಸರ್ಗಿಕ ಸರ್ಕಾರಿ ಹಳ್ಳವೂ ಇಂತಹದ್ದೇ ಗಂಟಲೊಣಗಿಸುವ ತಂತ್ರಜ್ಞಾನಕ್ಕೆ ಮತ್ತು ಧನಾಶೆಗೆ ಬಲಿಯಾಗಿದೆ ಎಂದು ಈ ಹಿಂದೆ ಹಲವಾರು ವರದಿಗಳನ್ನು ಬಿತ್ತಿದ್ದೆ.
​ಸುಮಾರು 05-22 ಎಕರೆ ಜಮೀನಿನಲ್ಲಿ, ಲಾಭದ ಕಣ್ಣು ನೆಟ್ಟ ಮಾಲೀಕರು ನೈಸರ್ಗಿಕ ಹಳ್ಳಕ್ಕೆ ಮಣ್ಣು ಹಾಕಿ ಸಂಪೂರ್ಣವಾಗಿ ಮುಚ್ಚಿಹಾಕಿ, ಅನಧಿಕೃತವಾಗಿ ಲೇಔಟ್ ನಿರ್ಮಿಸಿದ್ದು ಈಗ ಇಡೀ ತಾಲೂಕಿನಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಕೃತಿಯ ಒಡಲನ್ನು ಸೀಳಿ, ನಿಯಮಗಳನ್ನು ಗಾಳಿಗೆ ತೂರಿ ಸಾಗುತ್ತಿದ್ದ ಈ ಭೂಮಾಫಿಯಾದ ಅಟ್ಟಹಾಸಕ್ಕೆ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಕೆ. ಬಿ. ಮ್ಯಾಗಳಮನಿ ಅವರು ನೀಡಿರುವ ದೂರು ಒಂದು ತಾರ್ಕಿಕ ತಿರುವನ್ನು ನೀಡಿದೆ.


​ವರದಿಗಳ ವ್ಯತ್ಯಾಸ ಅಧಿಕಾರಶಾಹಿಯ ನಿಗೂಢ ಮುಖವಾಡ.
​ಸರ್ಕಾರಿ ಯಂತ್ರದ ಕೆಲಸದ ವೈಖರಿಯೇ ವಿಚಿತ್ರವಾದದ್ದು. ಕಡತಗಳು ಕೆಳಗಿನಿಂದ ಮೇಲಕ್ಕೆ ಚಲಿಸುವಾಗ ಸತ್ಯ ರೂಪಾಂತರಗೊಳ್ಳುತ್ತಾ ಸಾಗುತ್ತದೆ. ಕಂದಾಯ ಇಲಾಖೆಯ ಕೆಳಹಂತದಲ್ಲಿ, ಅಂದರೆ ಗ್ರಾಮ ಆಡಳಿತಾಧಿಕಾರಿಗಳು ಕೊಡುವ ವರದಿಗೂ, ಕಂದಾಯ ನಿರೀಕ್ಷಕ ಸುರೇಶ ಅವರು ಮೇಲಧಿಕಾರಿಗಳಿಗೆ ತಲುಪಿಸುವ ವರದಿಗೂ ನಡುವೆ ಸ್ಪಷ್ಟವಾದ “ವ್ಯತ್ಯಾಸ”ಗಳು ತಲೆಯೆತ್ತಿವೆ.
​ಕಂದಾಯ ನಿರೀಕ್ಷಕ ಸುರೇಶ್ ಅವರ ನಡೆಯಲ್ಲಿ ಕಂಡುಬರುತ್ತಿರುವ ಅನುಮಾನದ ನೆರಳು ಕೇವಲ ಕರ್ತವ್ಯಲೋಪವಷ್ಟೇ ಅಲ್ಲ; ಅದು ವ್ಯವಸ್ಥೆಯ ಒಳಗಿನ ಆಳವಾದ ನೈತಿಕ ಪತನವನ್ನು ಬಿಂಬಿಸುತ್ತದೆ. ಕೆಳಹಂತದ ವರದಿಯನ್ನು ಮುಚ್ಚಿಟ್ಟು ಅಥವಾ ತಿರುಚಿ, ಪ್ರಕರಣವನ್ನು ದಿಕ್ಕು ತಪ್ಪಿಸಲು ನಡೆಸಿದ ಯತ್ನವು ಆಡಳಿತ ಯಂತ್ರದ ವಿಶ್ವಾಸಾರ್ಹತೆಯನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ.


ಅಪರ ಜಿಲ್ಲಾಧಿಕಾರಿಗಳ ಕಡಕ್ ಆದೇಶ ಮರುತನಿಖೆಗೆ ಚಾಲನೆ.
​ಆದರೆ, ಸತ್ಯವನ್ನು ಅದೆಷ್ಟೇ ಕಾಗದಗಳ ಅಡಿಯಲ್ಲಿ ಬಚ್ಚಿಟ್ಟರೂ ಅದು ಯಾವುದೋ ಒಂದು ಕೋಣೆಯಿಂದ ಹೊರಬರಲೇಬೇಕು. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪತ್ರ ಸಂಖ್ಯೆ KOP-DC-20/27/2026-KOPDC-NAK-KOPPAL DC DC/E 462648 (ದಿನಾಂಕ: 13.08.2026) ರನ್ವಯ, ಮಾನ್ಯ ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ ರವರು ಈ ಶಂಕಿತ ನಡೆಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
​ತಹಶೀಲ್ದಾರರ ಕಚೇರಿಯಿಂದ ಬಂದ ವರದಿಯಲ್ಲಿ ‘ಗ್ರಾಮ ಆಡಳಿತಾಧಿಕಾರಿಗಳ ವರದಿ’ ಹಾಗೂ ‘ಕಂದಾಯ ನಿರೀಕ್ಷಕರ ವರದಿ’ಗಳ ನಡುವೆ ಎದ್ದು ಕಾಣುವ ವ್ಯತ್ಯಾಸ ಇರುವುದನ್ನು ಅಧಿಕೃತವಾಗಿ ಗುರುತಿಸಿರುವ ಅಪರ ಜಿಲ್ಲಾಧಿಕಾರಿಗಳು, ಪ್ರಕರಣವನ್ನು ಮರುಪರಿಶೀಲಿಸಿ ನಿಯಮಾನುಸಾರ ತನಿಖೆ ನಡೆಸಿ ಹೊಸದಾಗಿ ಅನುಫಾಲನಾ ವರದಿ ಸಲ್ಲಿಸುವಂತೆ ತಹಶೀಲ್ದಾರರಿಗೆ ಆದೇಶಿಸಿದ್ದಾರೆ.


​ಅಧಿಕಾರ ಮತ್ತು ಹಣದ ಬಲದಿಂದ ಹಳ್ಳದ ಹೆಣದ ಮೇಲೆ ‘ದೃಷ್ಟಿ ಎನ್‌ಕ್ಲೇವ್’ ಎಂಬ ನಕಲಿ ಸಾಮ್ರಾಜ್ಯ ಕಟ್ಟಲು ಹೊರಟವರಿಗೆ ಈ ಮರುತನಿಖೆಯ ಆದೇಶವು ಮರಣಶಾಸನವಾಗಲಿದೆ. ಹಳ್ಳದ 1 ಎಕರೆ 15 ಗುಂಟೆ ಒತ್ತುವರಿಯಾದ ಜಾಗ ಸಂಪೂರ್ಣವಾಗಿ ತೆರವಾಗಿ, ನೈಸರ್ಗಿಕ ನೀರು ಮತ್ತೆ ಹರಿಯುವವರೆಗೆ ಈ ಹೋರಾಟ ನಿಲ್ಲುವುದಿಲ್ಲ.
​ಅಧಿಕಾರಿಗಳು ಕಾನೂನಿನ ಪರಿಮಿತಿಯನ್ನು ಮರೆತು ಭೂಗಳ್ಳರ ಹಿತಾಸಕ್ತಿಗೆ ಮಣಿದರೆ, ಅದು ಇಡೀ ಸಮಾಜಕ್ಕೆ ಮಾಡುವ ದ್ರೋಹ. ಅಪರ ಜಿಲ್ಲಾಧಿಕಾರಿಗಳ ಈ ಮರುತನಿಖೆಯ ಆದೇಶವು ಅಕ್ರಮವೆಸಗಿದ ಅಧಿಕಾರಿಗಳ ಅಸಲಿ ಮುಖವಾಡವನ್ನು ಕಳಚುವುದೇ ಅಥವಾ ಮತ್ತೆ ಕಡತಗಳ ಮರೆಯಲ್ಲಿ ಸತ್ಯ ಅಡಗಿಹೋಗುವುದೇ? ಎಂಬುದನ್ನು ಕಾದುನೋಡಬೇಕಿದೆ.
‘ರಣಬೇಟೆ’ ತನಿಖೆ ಮುಂದುವರೆಯುತ್ತದೆ.

error: Content is protected !!
Scroll to Top