ಹಳ್ಳಿಕೇರಿ ಪಂಚಾಯತಿಯಲ್ಲಿ ನಿಯಮಬಾಹಿರ ಲೂಟಿ!

ಗದಗ ನೂತನ ಜಿ.ಪಂ. ಸಿಇಒ ಮುಕುಲ್ ಜೈನ್ ಅವರು ಭ್ರಷ್ಟ ಅಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಿ ತನಿಖೆಗೆ ಆದೇಶಿಸುವರೇ?

ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಸೆ:7

ಮುಂಡರಗಿ: ಸಾಮಾನ್ಯ ನಾಗರಿಕನಿಗೆ ಸರ್ಕಾರ ಎನ್ನುವುದು ಕೇವಲ ಕಾಗದದ ಮೇಲಿನ ಕಾಯ್ದೆಗಳಷ್ಟೇ ಅಲ್ಲ; ಅವನ ನಿತ್ಯಜೀವನಕ್ಕೆ ತಟ್ಟುವ ದಿನನಿತ್ಯದ ಅನುಭವ. ಆದರೆ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಆಡಳಿತ ಯಂತ್ರವು ಸಾರ್ವಜನಿಕರ ಹಿತ ಕಾಯುವ ಬದಲು ಅವರನ್ನೇ ಶೋಷಿಸುವ ಸಾಧನವಾಗಿದೆಯೇ ಎಂಬ ತೀವ್ರ ಸಂಶಯ ಮೂಡುತ್ತದೆ.


ಅಕ್ರಮದ ಮುಖ್ಯಾಂಶಗಳು ಹಾಗೂ ದೂರಾರೋಪಗಳು:
​ಆಸ್ತಿ ವರ್ಗಾವಣೆ ಮತ್ತು ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಸರ್ಕಾರ ನಿಗದಿಪಡಿಸಿದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಹೆಚ್ಚಿನ ಹಣ ಸಂಗ್ರಹಿಸುತ್ತಿರುವ ಗಂಭೀರ ಆರೋಪ ಬೆಳಕಿಗೆ ಬಂದಿದೆ.
​’ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993′ ಹಾಗೂ ತತ್ಸಂಬಂಧಿತ ಸರ್ಕಾರದ ಮಾರ್ಗದರ್ಶಿ ಸೂಚಿಗಳ ಪ್ರಕಾರ, ಆಸ್ತಿ ವರ್ಗಾವಣೆ ಶುಲ್ಕವನ್ನು ನೊಂದಾಯಿತ ದಸ್ತಾವೇಜಿನಲ್ಲಿ ಪಾವತಿಸಿದ ಮುದ್ರಾಂಕ ಶುಲ್ಕದ ಶೇಕಡಾ 2% ರಷ್ಟು ಮಾತ್ರ ವಸೂಲಿ ಮಾಡಬೇಕು.
​ಆದರೇ ಹಳ್ಳಿಕೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲತಾ ಮಾನೆ ಹಾಗೂ ಕರವಸೂಲಿಗಾರ ಹನುಮಂತಪ್ಪ ಅವರು ಮುದ್ರಾಂಕ ಶುಲ್ಕದ ಮೇಲೆ 2% ಲೆಕ್ಕ ಹಾಕುವ ಬದಲು, ಆಸ್ತಿಯ ಒಟ್ಟು ಮೌಲ್ಯದ ಮೇಲೆಯೇ ಶೇಕಡಾ 3% ರಿಂದ 4% ರಷ್ಟು ಅಕ್ರಮ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ.
ಪಂಚಾಯತಿಯ ಹಣಕಾಸು ವ್ಯವಹಾರಗಳನ್ನು ಪಾರದರ್ಶಕವಾಗಿ ತನಿಖೆ ಮಾಡಬೇಕಾದ ಹಿರಿಯ ಉಪ ನಿರ್ದೇಶಕರು, ಸ್ಥಳೀಯ ಆಡಿಟ್ ವೃತ್ತದ ಅಧಿಕಾರಿಗಳು, ಖಾತೆಗಳ ಅಧೀಕ್ಷಕರು ಹಾಗೂ ಸಹಾಯಕರು ಈ ಬೃಹತ್ ಆರ್ಥಿಕ ಅಕ್ರಮವನ್ನು ಆಡಿಟ್ ವರದಿಯಲ್ಲಿ ದಾಖಲಿಸಲು ಸಂಪೂರ್ಣ ವಿಫಲರಾಗಿದ್ದಾರೆ. ಇದು ಅವರ ಕರ್ತವ್ಯಲೋಪ ಮತ್ತು ಆಡಳಿತಾತ್ಮಕ ಶಾಮೀಲಾತಿಯನ್ನು ಎತ್ತಿಹಿಡಿಯುತ್ತದೆ.


ನೂತನ ಜಿ.ಪಂ. ಸಿಇಒ ಮುಕುಲ್ ಜೈನ್ ಅವರ ಪಾರದರ್ಶಕ ಆಡಳಿತಕ್ಕೆ ಸವಾಲು:
​ಗದಗ ಜಿಲ್ಲಾ ಪಂಚಾಯತಿಗೆ ಹೊಸದಾಗಿ ಆಗಮಿಸಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮುಕುಲ್ ಜೈನ್ ಅವರು ತಮ್ಮ ಆಡಳಿತಾವಧಿಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇಂತಹ ದಕ್ಷ ಅಧಿಕಾರಿಯ ಗಮನಕ್ಕೆ ಈ ಬೃಹತ್ ಅಕ್ರಮ ತರಲಾಗುತ್ತಿದ್ದು, ಅವರು ಜನಸಾಮಾನ್ಯರ ಪರವಾಗಿ ನಿಂತು ತಕ್ಷಣವೇ ಇಂತಹ ಭ್ರಷ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಿ, ಪಾರದರ್ಶಕ ತನಿಖೆಗೆ ಆದೇಶಿಸಬೇಕು ಎಂಬುದು ಸಾರ್ವಜನಿಕರ ಸ್ಪಷ್ಟ ಆಗ್ರಹವಾಗಿದೆ.


ತಾ.ಪಂ. ಇಒ ವಿಜಯಕುಮಾರ ಬೆಣ್ಣೆ ಅವರ ಪಾತ್ರ ಹಾಗೂ ನ್ಯಾಯಾಂಗ ಹೋರಾಟದ ಎಚ್ಚರಿಕೆ
​ಈ ಪ್ರಕರಣದಲ್ಲಿ ಮುಂಡರಗಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಜಯ ಕುಮಾರ ರವರು ಕೂಡಲೇ ಜಾಗೃತರಾಗಿ, ಆರೋಪಿತ ಪಿಡಿಒ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಶಿಫಾರಸು ಮಾಡಬೇಕು.
​ಒಂದು ವೇಳೆ ತಾಲೂಕು ಪಂಚಾಯತಿ ಅಧಿಕಾರಿಗಳು ಈ ಪ್ರಕರಣವನ್ನು ನಿರ್ಲಕ್ಷಿಸಿ, ಅಕ್ರಮವನ್ನು ಮುಚ್ಚಿಹಾಕಲು ಅಥವಾ ವಿಲೇಗೊಳಿಸಲು ಯತ್ನಿಸಿದರೆ, “ಅವರು ಸಹ ಈ ಅಕ್ರಮ ಮತ್ತು ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ” ಎಂದೇ ಭಾವಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿಹಿಡಿಯಲು ಹಾಗೂ ನ್ಯಾಯಕ್ಕಾಗಿ ಮುಂದಿನ ಹಂತದಲ್ಲಿ ನೇರವಾಗಿ ನ್ಯಾಯಾಂಗದ ಮೊರೆ ಹೋಗಲು ಸಿದ್ಧ ಎಂದು ದೂರುದಾರರು ಮತ್ತು ಪತ್ರಕರ್ತರು ತೀವ್ರ ಎಚ್ಚರಿಕೆ ನೀಡಿದ್ದಾರೆ.
​ಸಂಸ್ಥೆಗಳು ಮತ್ತು ಕಾಯ್ದೆಗಳು ನಾಗರಿಕನ ರಕ್ಷಣೆಗೆ ನಿರ್ಮಾಣವಾಗಿವೆಯೇ ಹೊರತು, ಆಡಳಿತದಲ್ಲಿರುವವರ ಧನದಾಹವನ್ನು ತೃಪ್ತಿಪಡಿಸುವುದಕ್ಕಲ್ಲ. ಗದಗ ಜಿಲ್ಲಾಡಳಿತ ಹಾಗೂ ನೂತನ ಜಿ.ಪಂ. ಸಿಇಒ ಮುಕುಲ್ ಜೈನ್ ಅವರು ಈ ಪ್ರಕರಣದಲ್ಲಿ ಕೆಳಹಂತದ ಅಕ್ರಮಕ್ಕೆ ಕಡಿವಾಣ ಹಾಕಿ ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಇಡೀ ತಾಲೂಕಿನ ಜನತೆ ಕಾದು ನೋಡುತ್ತಿದೆ.

ಸಂಚಿಕೆ ಮುಂದುವರೆಯುತ್ತದೆ….

error: Content is protected !!
Scroll to Top